ಜಿಲ್ಲೆ

3,000 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಆದಾಯದ ನಷ್ಟದ ಅಂದಾಜು: ಕರೋನಾ ತುರ್ತುಪರಿಸ್ಥಿತಿ ಪರಿಣಾಮ

ಬೆಂಗಳೂರು: ಕರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವುದರಿಂದ ಸುಮಾರು 1200 ರಿಂದ 1300 ಕೋಟಿ ರೂ. ಆದಾಯ ಖೋತಾ ಆಗಬಹುದೆಂದು ಅಂದಾಜು ಮಾಡಲಾಗಿದೆ. ಮಾಲ್​ಗಳು, ಪಬ್​ಗಳು ಬಂದ್ ಆಗುತ್ತಿರುವುದರಿಂದ ವಹಿವಾಟು ಸ್ಥಗಿತವಾಗಿ ಆದಾಯ ಖೋತಾ ಆಗಲಿದೆ.

ಮೊದಲೇ ತೆರಿಗೆ ಸಂಗ್ರಹ ಸುಮಾರು 2000 ಕೋಟಿ ರೂ. ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 1300 ಕೋಟಿ ರೂ. ಕಡಿಮೆಯಾಗಬಹುದೆಂದು ಹಣಕಾಸು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈ ತಿಂಗಳಿನಲ್ಲಿ ಸುಮಾರು 9000 ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯ ಗುರಿ ಇದೆ. 2 ವಾರಗಳಲ್ಲಿ 4500 ಕೋಟಿ ಸಂಗ್ರಹವಾಗಿದ್ದರೂ ಸಹ, ಉಳಿದ ಎರಡು ವಾರಗಳಲ್ಲಿ 4500 ಕೋಟಿ ರೂ. ಸಂಗ್ರಹವಾಗಬೇಕು.

ಒಂದು ವಾರಕ್ಕೆ 2250 ಕೋಟಿ ರೂ. ಸಂಗ್ರಹವಾಗಬೇಕು. ರಿಟೇಲ್ ವಹಿವಾಟು, ಪೆಟ್ರೋಲ್ ಮತ್ತು ಡಿಸೇಲ್ ಬಂಕ್​ಗಳಲ್ಲಿ ವಹಿವಾಟು ಇದ್ದೇ ಇರುತ್ತದೆ. ಅವುಗಳಿಂದ 1000 ಕೋಟಿ ರೂ. ತನಕ ತೆರಿಗೆ ಬರಬಹುದು. ಆದರೆ ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯೂ ಕಡಿಮೆಯಾಗಬಹುದೆಂದು ಅಂದಾಜು ಮಾಡಲಾಗುತ್ತಿದೆ.