ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಡ್ಗಿಚ್ಚು ನಂದಿಸುವ ಅಣಕು ಕಾರ್ಯಾಚರಣೆಯನ್ನು ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು.  
ಜಿಲ್ಲೆ

ಕಾಡ್ಗಿಚ್ಚು ನಿಗ್ರಹಕ್ಕೆ ಕಟ್ಟೆಚ್ಚರ: ಸುಬ್ರಹ್ಮಣ್ಯದಲ್ಲಿ ಅರಣ್ಯ ಸಚಿವ ಖಂಡ್ರೆ ಸೂಚನೆ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಬೇಸಿಗೆಯಲ್ಲಿ ರಾಜ್ಯದ ಅರಣ್ಯಗಳಲ್ಲಿ ಕಾಡ್ಗಿಚ್ಚಿನಿಂದ ಹಾನಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಕಟ್ಟೆಚ್ಚರ ವಹಿಸುವಂತೆ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಡ್ಗಿಚ್ಚು ನಂದಿಸುವ ಅಣಕು ಕಾರ್ಯಾಚರಣೆ ವೀಕ್ಷಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಈ ಬಾರಿ ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಎದುರಾಗಬಹುದು, ಕಾಡ್ಗಿಚ್ಚಿನ ಭೀತಿಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯದಲ್ಲಿ ಸತತ ನಿಗಾ ಇಡಲು ಸೂಚಿಸಿದರು.

ಇದಕ್ಕೂ ಮುನ್ನ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಭೇಟಿ ನೀಡಿ, ಅರಣ್ಯ ಸಂರಕ್ಷಣೆ ಕುರಿತ ಬೀದಿ ನಾಟಕ ವೀಕ್ಷಿಸಿದರು. ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಋತುಮಾನಗಳೇ ಬದಲಾಗಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಯುವಜನರು ಪಶು, ಪಕ್ಷಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕು. ಪ್ರಕೃತಿ ಪರಿಸರ ಉಳಿಸಬೇಕು ಎಂದರು.

ಆನೆ ಹಾವಳಿ ತಡೆಗೆ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಮತ್ತು ಕಾಡುಕೋಣ ಹಾವಳಿಯಿಂದ ಆಗುತ್ತಿರುವ ಬೆಳೆ ಹಾನಿ ಮತ್ತು ಜೀವಹಾನಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಮತ್ತು ಸುತ್ತಲಿನ ನಾಲ್ಕು ಗ್ರಾಮದಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್ ಮತ್ತು ಸುಳ್ಯ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 5ನೇ ಗ್ರಾಮವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ನಡೆದ ಅಹವಾಲು ಆಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಶ್ಚಿಘಟ್ಟದ ವ್ಯಾಪ್ತಿಯಲ್ಲಿರುವ ಈ ಭಾಗದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಕಾನೂನಾತ್ಮಕವಾಗಿ ಮತ್ತು ಕಾಯ್ದೆಯ ಮಿತಿಯಲ್ಲಿ ಪರಿಹರಿಸಲು ಯತ್ನಿಸುವುದಾಗಿ ಹೇಳಿದರು. ಅರಣ್ಯ ಸಂರಕ್ಷಣಾ ಕಾಯ್ದೆ 1978 ಜಾರಿಗೆ ಬರುವ ಮೊದಲು ಸಾಗುವಳಿ ಮಾಡುತ್ತಿದ್ದ 3 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಮತ್ತು ಸಣ್ಣ ಮನೆಗಳನ್ನು ಕಟ್ಟಿಕೊಂಡಿರುವವರನ್ನು ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗಿದೆ ಎಂದರು.

ಅರಣ್ಯ ಸಮೃದ್ಧಿಗೆ 5.6 ಕೋಟಿ ಸಸಿ ನಾಟಿ

ಅರಣ್ಯ ಸಮೃದ್ಧಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಈ ಬಾರಿ 5.6 ಕೋಟಿ ಸಸಿಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ನೆಡಲಾಗಿದೆ. ಆ ಮೂಲಕ ಅರಣ್ಯ ಸಮೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ 2 ಸಾವಿರ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿತ್ತು. ಅದನ್ನು ತೆರವುಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಕೊಲ್ಲಮೊಗ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 35 ಸಾವಿರ ಎಕರೆ ಜಮೀನನ್ನು ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಮಾನವ- ಪ್ರಾಣಿ ಸಂಘರ್ಷ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಾನವ- ಪ್ರಾಣಿ ಹಾನಿ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಆನೆ ಹಾವಳಿ ತಡೆಗೆ ಕಂದಕ ನಿರ್ಮಾಣ, ಸೌರಬೇಲಿ ಅಳವಡಿಕೆ ಮತ್ತು ರೈಲ್ವೆ ಬ್ಯಾರಿಕೇಡ್ ಹಾಕುವ ಕೆಲಸ ಆಗುತ್ತಿದೆ. ಆದರೆ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಆಗಿದೆ. ಇಲ್ಲಿ 6,395 ಆನೆಗಳಿವೆ. ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ. ಹೀಗಾಗಿ ಸಮಸ್ಯೆ ಉಲ್ಬಣವಾಗುತ್ತಿದೆ. ನಮ್ಮ ಇತಿಮಿತಿಯಲ್ಲಿ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುವುದು. ಕಾಡಿನಿಂದ ಆನೆಗಳು ಬಾರದಂತೆ ಮಾಡಲು, ಕಾಡಿನಲ್ಲಿ ಜಲಮೂಲಗಳನ್ನು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. -ಈಶ್ವರ ಖಂಡ್ರೆ, ಅರಣ್ಯ ಸಚಿವ