ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗೌರವಿಸಲಾಯಿತು.  
ಜಿಲ್ಲೆ

ಕಾಂಗ್ರೆಸ್ ಅಧಿಕಾರದಿಂದ ಸಮಾನ ನ್ಯಾಯ

ಇಂದಿರಾ ಎನ್ ಕೆ

ಕಾರ್ಕಳ: ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಎಲ್ಲ ವರ್ಗದ ಜನತೆಗೂ ಸಮಾನ ನ್ಯಾಯ ದೊರಕುತ್ತದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಬಸವಣ್ಣನ ನಾಡಿನಲ್ಲಿರುವ ನಾವು, ಈಗ ನುಡಿದ್ದಂತೆ ನಡೆದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾರ್ಕಳ ಗಾಂಧಿ ಮೈದಾನದಲ್ಲಿ ದಿ.ಗೋಪಾಲ ಭಂಡಾರಿ ಸ್ಮರಣಾರ್ಥ ವೇದಿಕೆಯಲ್ಲಿ ಕಾರ್ಕಳ ಕಾಂಗ್ರೆಸ್ ವತಿಯಿಂದ ಭಾನುವಾರ ಕುಟುಂಬೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಕಾರ್ಯಕರ್ತರು ವ್ಯಕ್ತಿ ಪೂಜೆ ಮಾಡದೆ, ಪಕ್ಷ ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. 2028ರಲ್ಲಿ ನಾವು ಮರಳಿ ಅಧಿಕಾರಕ್ಕೆ ಬರುವ ಎಲ್ಲ ಪ್ರಯತ್ನ ಮಾಡಲಿದ್ದೇವೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ಇಲ್ಲಿನ ಶಾಸಕರು, ಮೊದಲು ನೀವು ನಿಮ್ಮ ಪಕ್ಷದ ಹುದ್ದೆಗೆ ಏಕೆ ರಾಜೀನಾಮೆ ನೀಡಿದ್ದೀರಿ ಎಂದು ಈ ಕ್ಷೇತ್ರದ ಜನತೆಗೆ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಯಿತು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾಂಗ್ರೆಸ್ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಸುಧೀರ್ ಮರೋಳಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಹಕಾರಿ ಧುರೀಣ ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ರಮಾನಾಥ ರೈ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ರಕ್ಷಿತ್ ಶಿವರಾಮ್, ರಮೇಶ್ ಕಾಂಚನ್, ಜಿ.ಎ.ಬಾವ, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ನವೀನ್ ಕೊಳ್ಕೆಬೈಲು, ಕಿರಣ್ ಹೆಗ್ಡೆ, ಅಶ್ವಿನ್ ರೈ, ಬಿಪಿನ್‌ಚಂದ್ರ ಪಾಲ್, ಸೋಮನಾಥ, ಪದ್ಮರಾಜ್, ಕಾರ್ಕಳ ಗ್ಯಾರಂಟಿ ಯೋಜನೆ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಂಕರ ಸೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಅಶೋಕ ಕೊಡವೂರ್ ಸ್ವಾಗತಿಸಿದರು. ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

ಪರಶುರಾಮ ಬೆಟ್ಟ ತೋರಿಸಿ

ಪರಶುರಾಮ ಥೀಮ್ ಪಾರ್ಕ್ ಹೀಗೆಯೇ ಇರಬೇಕು. ಅದನ್ನು ನೋಡಿಯೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಜನ ನಾಯಕರನ್ನಾಗಿ ಮಾಡುತ್ತಾರೆ. ಜತೆಗೆ ಕ್ಷೇತ್ರದ ಹಾಗೂ ಇತರ ಬೇರೆ ಬೇರೆ ಕಡೆ ಜನರನ್ನು ಕರೆದುಕೊಂಡು ಹೋಗಿ ಪರಶುರಾಮ ಬೆಟ್ಟ ತೋರಿಸಿ ಇಲ್ಲಿಯ ಬಿಜೆಪಿ ನಾಯಕರು ಇಂತಹ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗವಾಡಿದರು.