ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪರಿಸರ ಸಂರಕ್ಷಣೆಯ ಕುರಿತ ಆಸಕ್ತಿ ಹೆಚ್ಚಿಸಲು ಉದ್ದೇಶಿಸಲಾಗಿದ್ದ ಸೆಲ್ಫಿ ಪಾಯಿಂಟ್ನ್ನು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್ ಉದ್ಘಾಟಿಸಿದರು. ಬಳಿಕ ಪರಿಸರ ರಕ್ಷಣೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ಲಾಸ್ಟಿಕ್ ಬಳಕೆಯಿಂದಾಗುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ವಿಭಾಗದ ವತಿಯಿಂದ ಸೆಣಬಿನ ಚೀಲಗಳನ್ನು ವಿತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಕೆಎಸ್ಆರ್ ನಿಲ್ದಾಣದಲ್ಲಿ ಮಾಲಿನ್ಯ, ತ್ಯಾಜ್ಯ ವಿಂಗಡನೆ ಮುಂತಾದ ಕ್ರಮಗಳ ಬಗ್ಗೆ ನಾಟಕ ಪ್ರದರ್ಶಿಸಿದರು. ಪರಿಸರ ದಿನದ ಹಿನ್ನೆಲೆ ಬೆಂಗಳೂರು ವಿಭಾಗ ವ್ಯಾಪ್ತಿಯ ನಿಲ್ದಾಣಗಳಲ್ಲಿ ಸುಮಾರು 8 ಸಾವಿರ ಗಿಡಗಳನ್ನು ನೆಡಲಾಗಿದೆ.