ಜಿಲ್ಲೆ

ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ!

arunakunigal

ಬೆಂಗಳೂರು: ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ.

ಜಯಂತ್ ರೆಡ್ಡಿ ಮೃತ ದುರ್ದೈವಿ. ವಿವಿ ಪುರಂನಲ್ಲಿರುವ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ಈ ಅವಘಡ ಸಂಭವಿಸಿದ್ದು, ವಿದ್ಯಾರ್ಥಿ ಸಾವಿನ ಸುತ್ತಾ ಅನುಮಾನದ ಹುತ್ತ ಬೆಳೆದಿದೆ.

ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಜಯಂತ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ವಿವಿ ಪುರಂ ಪೊಲೀಸರು ಪರಿಶೀಲನೆ ನಡೆಸಿ ವಿದ್ಯಾರ್ಥಿಯ ಶವವನ್ನು ಕಿಮ್ಸ್​ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮೃತ ಜಯಂತ್ ರೆಡ್ಡಿ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿಇ ಮೂರನೇ ಸೆಮಿಸ್ಟರ್​ ಓದುತ್ತಿದ್ದ. ಇಂದು ಇಯರ್ ಬ್ಯಾಕ್ ಆಗಿದ್ದ ಪರೀಕ್ಷೆ ಬರೆಯಲು ಬಂದಿದ್ದ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕಾಲೇಜಿನ ಶುಲ್ಕದ ವಿಚಾರಕ್ಕೆ ಬೇಸರವಾಗಿತ್ತೆ? ಪರೀಕ್ಷೆ ಬರೆಯುವ ವಿಚಾರಕ್ಕೆ ಟೆನ್ಷನ್ ಆಗಿತ್ತೇ? ಎಂಬ ಅನುಮಾನ ಮೂಡಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.