ಜಿಲ್ಲೆ

ಟ್ರಸ್ಟ್ ಕಾರ್ಯ ಸಮಾಜಕ್ಕೆ ಪ್ರೇರಣೆ : ರಾಧಾಕೃಷ್ಣ ರೈ ಉಮಿಯ ಮೆಚ್ಚುಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹರೇಕಳ ಹಾಜಬ್ಬರಂಥವರನ್ನು ಸಮಾಜಕ್ಕೆ ಪರಿಚಯಿಸಿದ, ಶಿಕ್ಷಣ ಹೆಚ್ಚಿನ ಮಹತ್ವ ನೀಡುತ್ತಿದ್ದ ಗುರುವಪ್ಪ ಬಾಳೇಪುಣಿ ಹೆಸರಲ್ಲಿ ಶೈಕ್ಷಣಿಕ ದತ್ತನಿಧಿ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ಬೆಳವಣಿಗೆ, ಸಮಾಜಕ್ಕೆ ಪ್ರೇರಣೆ ನೀಡುವಂತಹ ಜನಶಿಕ್ಷಣ ಟ್ರಸ್ಟ್‌ನಲ್ಲಿ ಈ ಕಾರ್ಯ ನಡೆಯುತ್ತಿರುವುದರಿಂದ ಶ್ಲಾಘನೀಯ ಎಂದು ಉದ್ಯಮಿ ರಾಧಾಕೃಷ್ಣ ರೈ ಉಮಿಯ ಅಭಿಪ್ರಾಯಪಟ್ಟರು.

ಮಂಗಳೂರಿನ ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶನಿವಾರ ಮುಡಿಪು ಜನಶಿಕ್ಷಣ ಟ್ರಸ್ಟ್‌ನಲ್ಲಿ ನಡೆದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿ ಸ್ಮರಣಾರ್ಥ ಶೈಕ್ಷಣಿಕ ದತ್ತಿನಿಧಿ ಹಸ್ತಾಂತರಿಸಿ ಮಾತನಾಡಿದರು.

ದ.ಕ. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪೊಸ ಕುರಲ್ ವಾಹಿನಿ ಆಡಳಿತ ನಿರ್ದೇಶಕ ವಿದ್ಯಾಧರ ಶೆಟ್ಟಿ, ಖಾಸಗಿ ವಾಹಿನಿ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್, ಇರಾ ಗ್ರಾಪಂ ಅಧ್ಯಕ್ಷ ಉಮ್ಮರ್ ಕುಂಞಿ, ಕಲಾವಿದ ದಿನೇಶ್ ನಡಾರ್, ಉದ್ಯಮಿ ಇಬ್ರಾಹಿಂ ತಪ್ಷಿಯಾ ನಡುಪದವು, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಅಬೂಬಕ್ಕರ್ ಜಲ್ಲಿ, ಎಜು ಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ರಮೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಮರಕಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಧೃತಿ ವಂದಿಸಿದರು.

ವಿದ್ಯಾರ್ಥಿಗಳು ಸಮಾಜದ ಶಕ್ತಿ. ಹೆಚ್ಚು ಜನರು ಓರ್ವ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ಆದರ್ಶ ಪಾಲನೆ ಮಾಡುವುದು ವಿರಳ. ಆದರೆ ಎಜು ಕಾರುಣ್ಯ ಟ್ರಸ್ಟ್ ಗುರುವಪ್ಪ ಬಾಳೇಪುಣಿ ಅವರ ಆದರ್ಶ ಪಾಲಿಸಿ ಹೆಸರು ಉಳಿಸುವ ಪ್ರಯತ್ನ ಮಾಡಿದೆ. ಇದರ ಫಲಾನುಭವಿಗಳು ಮುಂದಿನ ದಿನಗಳಲ್ಲಿ ಇತರರ ಶಿಕ್ಷಣಕ್ಕೆ ಬೆಳಕಾಗಬೇಕು. ಶೀನ ಶೆಟ್ಟಿ ದ.ಕ. ಜಿಲ್ಲಾ ಸ್ವಚ್ಛತಾ ರಾಯಭಾರಿ