ಜಿಲ್ಲೆ

ಮನಸೂರೆಗೊಂಡ ಕಿರುಷಷ್ಠಿ ಸಾಂಸ್ಕೃತಿಕ ವೈವಿಧ್ಯ

Avinash R

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಕಿರುಷಷ್ಠಿ ಸಾಂಸ್ಕೃತಿಕ ವೈಭವವು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು. ಪ್ರಥಮ ದಿನ ಶ್ರೀ ಕ್ಷೇತ್ರದ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಕಲಾಸಕ್ತರಿಗೆ ಕಲಾ ರಸದೌತಣ ನೀಡಿತು.

ಆರಂಭದಲ್ಲಿ ಅಂಕುಶ್ ಎನ್.ನಾಯಕ್ ಬಳಗದಿಂದ ಸಿತಾರ್ ವಾದನ ನಡೆಯಿತು. ಇವರಿಗೆ ತಬಲಾದಲ್ಲಿ ವಿದ್ವಾನ್ ಆದರ್ಶ ಶೆಣೈ ಹಾಗೂ ಪಕ್ವಾಜ್‌ನಲ್ಲಿ ವಿದ್ವಾನ್ ಶ್ರೀದತ್ ಪ್ರಭು ಸಹಕರಿಸಿದರು. ಪ್ರಧಾನ ರಾಗವಾಗಿ ಚಾರುಕೇಶಿಯನ್ನು ಆಯ್ದುಕೊಂಡು ಅಂಕುಶ್ ನಾಯಕ್ ಕಾರ್ಯಕ್ರಮ ಆರಂಭಿಸಿದರು. ನಂತರ ಕೀರವಾಣಿಯಲ್ಲಿ ಜಯದುರ್ಗೆ, ಯಮನ್ ರಾಗದಲ್ಲಿ ಕೃಷ್ಣಾ ನೀ ಬೇಗನೆ ಬಾರೋ ಮತ್ತು ಪಾಯೋಜಿಮನ್ ಭಜನ್ ಅನ್ನು ಸಾದರಪಡಿಸಿದರು. 3 ತಾಸಿನ ಇವರ ಕಛೇರಿಯು ಕಲಾರಸಿಕರ ಮನ ತಣಿಸಿತು.

ಕೀರ್ತನೆಗಳ ಕೊಳಲು ವಾದನ: ನಂತರ ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ ಕೊಚ್ಚಿನ್ ಅವರಿಂದ ಕೊಳಲು ವಾದನ ನೆರವೇರಿತು. ನಾಟ ರಾಗದಲ್ಲಿ ಸ್ವಾಮಿನಾಥ ಪರಿಪಾಲಯಂ, ಕಾನಡ ರಾಗದಲ್ಲಿ ಮಾಮವಸದಾ, ಮೋಹನರಾಗದಲ್ಲಿ ಸ್ವಾಗತಂಕೃಷ್ಣ ಸೇರಿದಂತೆ ಇತರ ಪ್ರಸಿದ್ಧ ಕೃತಿಗಳನ್ನು ನುಡಿಸಿದರು. ಇವರಿಗೆ ವಯೋಲಿನ್‌ನಲ್ಲಿ ವಿದ್ವಾನ್ ಮಾಂಜೂರ್ ರಂಜಿತ್, ಮೃದಂಗಂನಲ್ಲಿ ವಿದ್ವಾನ್ ಡಾ.ಕೆ.ಜಯಕೃಷ್ಣನ್, ಘಟಂನಲ್ಲಿ ವಿದ್ವಾನ್ ಮಾಂಜೂರ್ ಉಣ್ಣಿಕೃಷ್ಣನ್ ಸಾಥ್ ನೀಡಿದರು.

ಸ್ವರ ರಾಗಮಾಧುರ‌್ಯ: ನಂತರ ಡ್ಯಾನ್ಸ್ ಬೀಟ್ಸ್ ಬೆಳ್ಳಾರೆಯ ಬೆಳ್ಳಾರೆ, ಪಂಜ,ಸುಬ್ರಹ್ಮಣ್ಯ, ಕೈಕಂಬ ಶಾಖೆಯ ವಿದ್ಯಾರ್ಥಿಗಳಿಂದ ಜನಪದೀಯ ಮತ್ತು ಭಕ್ತಿ ಪ್ರಧಾನವಾದ ನೃತ್ಯಗಳು ನಡೆದವು. ಅನೇಕ ದಾಸರ ಪದಗಳಿಗೆ ಮತ್ತು ಕೀರ್ತನೆಗಳಿಗೆ ಪುಟಾಣಿಗಳು ಸೇರಿದಂತೆ ಯುವ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ನೃತ್ಯರೂಪಕ ಪ್ರದರ್ಶಿತವಾಯಿತು. ಬಳಿಕ ಮನೋಜ್ ಕುಮಾರ್ ಪೂಕುನ್ನತ್ ಪೊಯಿನಾಚಿ ಇವರಿಂದ ಸ್ವರ ರಾಗಂ ಆರ್ಕೆಸ್ಟ್ರಾ ನಡೆಯಿತು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರನ್ನೊಳಗೊಂಡ 20 ಜನ ಕಲಾವಿದರ ತಂಡವು ಅತ್ಯದ್ಭುತ ಸಂಗೀತ ರಸಸಂಜೆ ನಡೆಸಿಕೊಟ್ಟರು.

ಪ್ರಸಾದ ನೀಡಿ ಗೌರವ

ಎಲ್ಲ ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರನ್ನು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ, ಅಚ್ಚುತ್ತ ಗೌಡ ಬಳ್ಪ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶ್ರೀ ದೇವಳದ ಕೆ.ಎಂ.ಗೋಪಿನಾಥ್ ನಂಬೀಶ, ರಾಜಲಕ್ಷ್ಮೀ ಶೆಟ್ಟಿಗಾರ್, ಶಿವಸುಬ್ರಹ್ಮಣ್ಯ ಭಟ್, ಮಹೇಶ್ ಕುಮಾರ್ ಎಸ್, ವಿಶ್ವನಾಥ್, ಕುಮಾರ ಕೆ.ಕೆ, ಯೋಗೀಶ್ ಎಂ.ವಿಟ್ಲ, ನಿತೀನ್ ನೂಚಿಲ, ಅಶೋಕ್ ಅತ್ಯಡ್ಕ, ಸದಾನಂದ ಕಾರ್ಜ, ಪವನ್‌ಕುಮಾರ್, ದೇವಿದಾಸ್ ಸಹಕರಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.