ವಡ್ಡರಹಟ್ಟಿ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಯವ್ಯಯ ಮಂಡನೆ ಮತ್ತು ಅನುಮೋದನೆ ಸಾಮಾನ್ಯ ಸಭೆಯಲ್ಲಿ ಬಜೆಟ್ ಪತ್ರ ಬಿಡುಗಡೆ ಮಾಡಲಾಯಿತು. ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಪಿಡಿಒ ಸುರೇಶ ಚಲವಾದಿ, ಕಾರ್ಯದರ್ಶಿ ಈಶಪ್ಪ ಇತರರಿದ್ದರು. 
ಜಿಲ್ಲೆ

ಮಹಿಳಾ ಸಬಲೀಕರಣಕ್ಕೆ ಒತ್ತು

ಗಾಯತ್ರಿ ಮಾಲಿಪಾಟೀಲ್

ಗಂಗಾವತಿ: ನಿರೀಕ್ಷಿತ ಅನುದಾನದಲ್ಲಿ ಬಡತನ ನಿರ್ಮೂಲನೆಗೆ ಆದ್ಯತೆ ನೀಡಿದ್ದು, ಮಹಿಳಾ ಸಬಲೀಕರಣಕ್ಕೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಆಯವ್ಯಯ ಮಂಡನೆ ಮತ್ತು ಅನುಮೋದನೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ವಿವಿಧ ಮೂಲದಿಂದ 8.90 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಿಂದ (ಮಾನವ ದಿನಗಳ ಮತ್ತು ಸಮುದಾಯ ಆಸ್ತಿಗಳ ಸೃಜನೆ) 7.30 ಕೋಟಿ.ರೂ., ಸ್ಥಳೀಯ ಸಂಪನ್ಮೂಲ ಸಂಗ್ರಹಣೆಯಿಂದ 96 ಲಕ್ಷ ರೂ., 15ನೇ ಹಣಕಾಸು ಅನುದಾನದಿಂದ 64 ಲಕ್ಷ ರೂ. ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಅನುದಾನವನ್ನು ಮಕ್ಕಳ ಕಾಳಜಿ, ಶಿಕ್ಷಣ, ಕ್ರೀಡಾಭಿವೃದ್ಧಿ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಚ್ಛತೆ-ನೈರ್ಮಲೀಕರಣ, ಕುಡಿಯುವ ನೀರು, ನಾಗರಿಕ ಸೌಲಭ್ಯಗಳ ಕಾಮಗಾರಿ, ಉದ್ಯಾನಗಳ ಅಭಿವೃದ್ಧಿ, ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಗಾಗಿ ವಿನಿಯೋಗಿಸಲಾಗುವುದು. ವಿವಿಧ ಯೋಜನೆ ಹಾಗೂ ಅನುದಾನವನ್ನು ಹಂಚಿಕೆ ಮಾಡಿ ಕಾರ್ಯಕ್ರಮ ಅನುಷ್ಠಾನ ಮಾಡುವ ಗುರಿ ಹೊಂದಲಾಗಿದೆ ಎಂದರು.

ಪಿಡಿಒ ಸುರೇಶ ಚಲವಾದಿ ಮಾತನಾಡಿ, ಬಜೆಟ್‌ಗೆ ಪೂರಕವಾಗಿ ನಿಗದಿತ ಕಾಲಾವಧಿಯಲ್ಲಿ ಸರ್ಕಾರದ ನಿಯಮ ಹಾಗೂ ಗ್ರಾಪಂ ತೀರ್ಮಾನದಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು. ಬೇಸಿಗೆ ಆರಂಭವಾಗಿದ್ದು, ನೀರು ಪೂರೈಕೆಗೆ ಸಮಯ ನಿಗದಿ ಮಾಡಲಾಗುವುದು. ನೀರು ಅಗತ್ಯಕ್ಕೆ ತಕ್ಕಂತೆ ಬಳಸಿ ಪೋಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.