ಜಿಲ್ಲೆ

ಬಸವಾದಿ ಶರಣರ ವಿಚಾರೆಧಾರೆ ಮೈಗೂಡಿಸಿಕೊಳ್ಳಿ: ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಮತ

ಬೆಂಗಳೂರು: ಜನರು ತಮ್ಮ ಜೀವನದಲ್ಲಿ ಬಸವಾದಿ ಶರಣರ ವಿಚಾರಧಾರೆಯನ್ನು ಅಳವಡಿಸಿಕೊಂಡು ಕಾಯಕ ಮಾರ್ಗದಲ್ಲಿ ಸಾಗುವಂತಾಗಬೇಕು ಎಂದು ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.

ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಮಿತಿಯ ವಾರ್ಷಿಕೋತ್ಸವ ಹಾಗೂ ‘ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದರು.

ಜೀವನ ಹೇಗೆ ನಡೆಸಬೇಕು ಎಂಬುದಕ್ಕೆ ಬಸವಾದಿ ಶರಣರ ವಿಚಾರಧಾರೆಗಳು ದಾರಿದೀಪ ಇದ್ದಂತೆ. ಜಗದ್ಗುರು ಬಸವಣ್ಣ ಸಮಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿದ್ದರು. ಅದರಂತೆ, ನಮ್ಮ ಹೆಸರು ಸಮಾಜ ಕಟ್ಟವವರ ಸಾಲಿನಲ್ಲಿ ಬರಬೇಕೇ ಹೊರತು ಕೆಡಹುವುವವರ ಪಟ್ಟಿಯಲ್ಲಿ ಅಲ್ಲ. ಕೈಯಲ್ಲಿ ಕೆಲಸ, ಮನಸ್ಸಿನಲ್ಲಿ ಪ್ರೀತಿ, ಕರುಣೆ ಮತ್ತು ತಲೆಯಲ್ಲಿ ಒಳ್ಳೆಯ ವಿಚಾರ ಇಟ್ಟುಕೊಂಡು ಮುನ್ನಡೆಯುವುದೇ ಶರಣರಿಗೆ ನೀಡುವ ಗೌರವವಾಗಿದೆ. ಈ ದಾರಿಯಲ್ಲಿ ನಾವು ನಡೆದರೆ ಅದೇ ಬಸವ ದಾರಿಯಾಗಲಿದೆ ಎಂದರು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾತನಾಡಿ, ಅಂದಿನ ಬಸವಾದಿ ಶರಣರ ವಚನಗಳೇ ಹಿಂದಿನ ಸಂವಿಧಾನವಾಗಿದೆ. ಬಸವಣ್ಣನವರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕಾಯಕ ತತ್ವದಲ್ಲಿ ನಾವೆಲ್ಲರೂ ಸಾಗಬೇಕು ಎಂದರು. ಸಮಾರಂಭದಲ್ಲಿ ಶ್ರೀ ಸೋಮಶೇಖರ ಸ್ವಾಮೀಜಿಗೆ ‘ಬಸವ ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ಪಾದನಾ ಅಭಿಯಂತರ ಇಲಾಖೆಯ ವಿಮಾನ ವಿಭಾಗದ ಅಪರ ಮಹಾ ವ್ಯವಸ್ಥಾಪಕ ಬಿ.ಆರ್. ವಿನಯ್‌ಬಾಬು, ಸಮಿತಿ ಅಧ್ಯಕ್ಷ ಓ.ಶರಣ ಬೇಲೂರಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಶರಣ ಗುರುಸ್ವಾಮಿ, ಹಿಂವಿಕಾ ನೌಕರರ ಸಂಘ ಎಚ್‌ಎಎಲ್ ಉಪಾಧ್ಯಕ್ಷ ಎನ್. ಧರಿಕುಮಾರ್ ಇತರರಿದ್ದರು.