ಬೆಂಗಳೂರು: ಮೂರು ಆನೆ ದಂತಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಬಾಗಲಗುಂಟೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಾಗಡಿ ತಾಲೂಕಿನ ಕುದೂರು ಮೂಲದ ಲೋಕೇಶ್ (44) ಮತ್ತು ಮಂಜುನಾಥ್ ಪೂಜಾರಿ (28) ಬಂಧಿತರು. ಲೋಕೇಶ್ ಆಟೋ ಚಾಲಕನಾಗಿದ್ದಾನೆ. ಮಂಜುನಾಥ್ ಪೂಜಾರಿ ಮಾದಿಗೊಂಡನಹಳ್ಳಿಯ ಡಾಬಾದಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ರಾಮನಗರದ ಕೃಷ್ಣ ಎಂಬಾತ ಲೋಕೇಶ್ಗೆ ಪರಿಚಯವಾಗಿದ್ದ. ಆತ ತನ್ನ ಬಳಿಯಿದ್ದ ಆನೆದಂತಗಳನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿಸುವಂತೆ ಲೋಕೇಶ್ಗೆ ಹೇಳಿದ್ದ. ಹೀಗಾಗಿ, ಮಂಜುನಾಥ್ ಪೂಜಾರಿಯನ್ನು ಸಂಪರ್ಕಿಸಿ ಆನೆದಂತ ಮಾರಾಟದ ವಿಚಾರವನ್ನು ತಿಳಿಸಿದ್ದ.
ಆರೋಪಿಗಳಿಂದ 3 ಆನೆದಂತಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಕೃಷ್ಣ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.