ಜಿಲ್ಲೆ

ಸಾಯಲೆಂದು ವಿದ್ಯುತ್ ಟವರ್ ಏರಿದ ಮಗ: ಪರಿ ಪರಿಯಾಗಿ ಬೇಡಿಕೊಂಡ್ರೂ ಅಮ್ಮನ ಎದುರೇ ಸಾವಿಗೆ ಶರಣಾದ ಪುತ್ರ! Electrocution

Electrocution : ಆತ್ಮಹತ್ಯೆ ನಿರ್ಧಾರ ಮಾಡಿದ ಯುವಕನೊಬ್ಬ ಹೈಲೋಲ್ಟೇಜ್ ವಿದ್ಯುತ್ ಟವರ್ ಏರಿ ಕುಳಿತ. ತಾಯಿಯನ್ನ ಸ್ಥಳಕ್ಕೆ ಕರೆಸಲು ಬೇಡಿಕೆ ಇಟ್ಟ. ಅಮ್ಮ ಬಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಕೆಳಗಿಳಿಯದೆ ವಿದ್ಯುತ್ ‌ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡೇಬಿಟ್ಟ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕದೇವಸ್ಥಾನ ಬೀದಿ ನಿವಾಸಿ ಮಸಣಶೆಟ್ಟಿ (28) ಆತ್ಮಹತ್ಯೆ ಮಾಡಿಕೊಂಡ ಯುವಕ.

ಕೊಳ್ಳೇಗಾಲ ಪಟ್ಟಣದ ಲಿಂಗಾಣಪುರ ಹೊರ ವಲಯದ ಜಮೀನಲ್ಲಿ ಹಾದು ಹೋಗಿರುವ 63 ಕೆವಿ ವಿದ್ಯುತ್ ಟವರ್ ಲೈನ್ ತಂತಿ ಹಿಡಿದು ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ.

ರೈತ ದೊಡ್ಡಮಲ್ಲ ಅವರ ಜಮೀನಿನಲ್ಲಿ ಹಾಕಿರುವ ವಿದ್ಯುತ್ ಟವರ್ ಅನ್ನು ಬೆಳಗ್ಗೆ ಮಸಣಶೆಟ್ಟಿ ಏರಿದ್ದ. ಇದನ್ನು ನೋಡಿದ ಸ್ಥಳೀಯರು ಹಾಗೂ ಅಕ್ಕಪಕ್ಕದ ಜಮೀನಿನ ರೈತರು ಕೆಳಗಿಳಿಯಲು ಹೇಳಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸರು ಹಾಗೂ ಗ್ರಾಮಾಂತರ ಠಾಣಾ ಪೊಲೀಸರು‌ ಹಾಗೂ ಸೆಸ್ಕ್ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್​ಗಳು, ಅಗ್ನಿ ಶಾಮಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಳಗೆ ಇಳಿಯುವಂತೆ ಕೇಳಿಕೊಂಡರು.

ಆದರೆ, ಮಸಣಶೆಟ್ಟಿ ನನ್ನ ತಾಯಿಯನ್ನು ಕರೆಸಿ ನಾನು ಆಕೆಯೊಂದಿಗೆ ಮಾತನಾಡಬೇಕು ಎಂದ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಧಾವಿಸಿದರು. ಈ ವೇಳೆ ಕೆಳಗೆ ಇಳಿಯುವಂತೆ ಪರಿ ಪರಿಯಾಗಿ ಕೇಳಿಕೊಂಡರೂ ನೋಡು ನೋಡುತ್ತಿದ್ದಂತೆ ವಿದ್ಯುತ್ ತಂತಿ ಹಿಡಿದು‌ ಮೃತಪಟ್ಟ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಾಗಿದೆ.