ಜಿಲ್ಲೆ

ವಿದ್ಯುತ್ ಪ್ರಸರಣ ಜಾಲ ಸುಗಮ

Avinash R

ಕಾಸರಗೋಡು: ಜಿಲ್ಲೆಯ ವಿದ್ಯುತ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಕೆಎಸ್‌ಇಬಿ ಕಾರ್ಮಿಕರು ಮತ್ತು ಅಧಿಕಾರಿಗಳ ಸಂಘವು, ಜಿಲ್ಲಾಮಟ್ಟದ ವಿದ್ಯುತ್ ಅಭಿವೃದ್ಧಿ ವಿಚಾರ ಸಂಕಿರಣವನ್ನು ಚಟ್ಟಂಚಾಲ್‌ನಲ್ಲಿ ಶುಕ್ರವಾರ ಆಯೋಜಿಸಿತು.

ಉದುಮ ಶಾಸಕ ವಕೀಲ ಸಿ.ಎಚ್.ಕುಞಂಬು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯುತ್ ಪ್ರಸರಣ ವಲಯದಲ್ಲಿ ಉನ್ನತೀಕರಣದ ಜತೆಗೆ ಪ್ರಸರಣ ಜಾಲ ಸುಗಮಗೊಳಿಸಬೇಕು. ಕಾಸರಗೋಡು ಪ್ರಸರಣ ಕಚೇರಿ ಕಾಮಗಾರಿ ತ್ವರಿತಗೊಳಿಸಬೇಕು ಎಂದರು.

ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ದಿಕ್ಸೂಚಿ ಭಾಷಣ ಮಾಡಿದರು.
ಜನಪ್ರತಿನಿಧಿಗಳು, ಕೆಎಸ್‌ಇಬಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕೋದ್ಯಮಿಗಳು, ದೊಡ್ಡ ಗ್ರಾಹಕರು ಹಾಗೂ ಸರ್ಕಾರದ ನಾನಾ ಇಲಾಖೆಗಳನ್ನು ಒಟ್ಟು ಸೇರಿಸಿ ಕಾರ್ಯಾಗಾರ ಆಯೋಜಿಸಿದಲ್ಲಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕೆ.ಎಸ್.ಇ.ಬಿ ಅಧಿಕಾರಿಗಳ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಅರುಣ್ ವಿಷಯ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಚೆಮ್ನಾಡ್ ಗ್ರಾಪಂ ಅಧ್ಯಕ್ಷೆ ಸುಫೈಜಾ ಅಬೂಬಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಸಜಿತ್ ಕುಮಾರ್, ಟ್ರಾನ್ಸ್‌ಗ್ರಿಡ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣೇಂದು, ಕಾರ್ಯಪಾಲಕ ಅಭಿಯಂತರಾದ ಕೆ.ನಾಗರಾಜ ಭಟ್, ಕೆ.ಲತಾ, ಆಶಾ.ಎಂ, ಎಂ.ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು.

ಕೆಎಸ್‌ಇಬಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ವಿ.ಜನಾರ್ದನನ್ ಸ್ವಾಗತಿಸಿದರು. ಕಾರ್ಮಿಕರ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಜಯಕೃಷ್ಣನ್ ವಂದಿಸಿದರು.

ಉಡುಪಿ-ವಯನಾಡ್ ಪವರ್‌ಹೈವೆ ಸಾಕಾರ

ಉಡುಪಿ-ಕರಿಂತಲ-ವಯನಾಡ್ ಪವರ್‌ಹೈವೆ ಸಾಕಾರಗೊಳಿಸುವುದರ ಜತೆಗೆ ತುರ್ತಾಗಿ ನಡೆಸಬೇಕಾದ ಕಾಮಗಾರಿಗಳ ಬಗ್ಗೆ ವಿಚಾರಸಂಕಿರಣದಲ್ಲಿ ಆಗ್ರಹಿಸಲಾಯಿತು. ವಿದ್ಯುತ್ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆ ನೀಗಿಸಬೇಕು. ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದನೆಯ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಬೇಕು. 110 ಕೆವಿ ತೌಡುಗೋಳಿ-ಕುಬಣೂರು-ಮಂಜೇಶ್ವರಂ ಮಾರ್ಗದ ಕರ್ನಾಟಕ ಭಾಗದ ಲೈನ್ ನವೀಕರಿಸುವಂತೆಯೂ ಆಗ್ರಹಿಸಲಾಯಿತು.