ಇನ್ನಾ ಗ್ರಾಮದ ಉಕ್ಕುಡ ಪ್ರದೇಶದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು 
ಜಿಲ್ಲೆ

ಗದ್ದೆಯಲ್ಲೇ ವಿದ್ಯುತ್ ಟವರ್, ಗ್ರಾಮಸ್ಥರ ಆಕ್ರೋಶ, ಹೋರಾಟ ಎಚ್ಚರಿಕೆ, ಮಾತಿನ ಚಕಮಕಿ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಉಡುಪಿಯ ಎಲ್ಲೂರು ಗ್ರಾಮದ ನಂದಿಕೂರಿನಿಂದ ಕೇರಳದ ಕಾಸರಗೋಡಿಗೆ ವಿದ್ಯುತ್ ಸರಬರಾಜಿಗಾಗಿ ಟವರ್ ನಿರ್ಮಾಣ ಕಾಮಗಾರಿ ಇನ್ನಾ ಗ್ರಾಮದಲ್ಲಿ ಜನವಿರೋಧದ ನಡುವೆಯೂ ಆರಂಭಗೊಂಡಿದ್ದು, ಮಂಗಳವಾರ ಮತ್ತೆ ಖಾಸಗಿ ಕೃಷಿ ಗದ್ದೆಯಲ್ಲಿ ಟವರ್ ನಿರ್ಮಾಣಕ್ಕೆ ಮುಂದಾದ ವೇಳೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾ ಗ್ರಾಪಂ ವ್ಯಾಪ್ತಿಯ ಉಕ್ಕುಡ ಎಂಬಲ್ಲಿ ಮಂಗಳವಾರ ಖಾಸಗಿ ಜಮೀನಿನ ಮಾಲೀಕರಿಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡದೆ ಕೃಷಿ ಭೂಮಿಗೆ ಏಕಾಏಕಿ ಜೆಸಿಬಿ ಯಂತ್ರ ತಂದು ಟವರ್ ನಿರ್ಮಾಣ ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೋರಾಟ ಎಚ್ಚರಿಕೆ

ಟವರ್ ನಿರ್ಮಾಣಕ್ಕೆ ಬಂದ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಯಾವುದೇ ಕಾರಣಕ್ಕೂ ಖಾಸಗಿ ಜಾಗದಲ್ಲಿ ಟವರ್ ನಿರ್ಮಿಸಲು ಬಿಡುವುದಿಲ್ಲ. ಅಲ್ಲದೆ ಕೃಷಿ ಭೂಮಿಯಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ಯಾರು ನೀಡಿದ್ದು? ಜಿಲ್ಲಾಧಿಕಾರಿಗಳು ಎಸಿ ರೂಮಿನಲ್ಲಿ ಕುಳಿತು ಆದೇಶ ಹೊರಡಿಸುವುದಲ್ಲ. ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿ, ಜನರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಕಾಮಗಾರಿಗೆ ಮುಂದಾಗುವುದು ಎಷ್ಟು ಸರಿ? ಜನರ ವಿರೋಧದ ನಡುವೆ ಅಧಿಕಾರಿಗಳು ಕಾಮಗಾರಿ ಮುಂದುವರಿಸಿದರೆ ಜಿಲ್ಲಾಧಿಕಾರಿ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ದಾರಿ ನಿರ್ಮಿಸಿ

ನಮಗೆ ಪರಿಹಾರದ ಮೊತ್ತ ದುಪ್ಪಟ್ಟು ಕೊಡಿ ಎಂದು ಕೇಳುತ್ತಿಲ್ಲ. ಬಡಪಾಯಿ ಕೃಷಿಕರ ಕೃಷಿ ಜಮೀನಿನ ಮೇಲೆ ಹಾದು ಹೋಗುವ ವಿದ್ಯುತ್‌ಲೈನ್ ತಪ್ಪಿಸಿ ಪ್ರತ್ಯೇಕ ದಾರಿಯಲ್ಲಿ ಟವರ್ ನಿರ್ಮಿಸಿ ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಅದಕ್ಕೆ ಸ್ಪಂದಿಸದೆ ಜನ ವಿರೋಧದ ನಡುವೆಯೂ ಟವರ್ ನಿರ್ಮಾಣಕ್ಕೆ ಪದೇ ಪದೆ ಆದೇಶ ನೀಡುವುದು ಎಷ್ಟು ಸರಿ? ಜಿಲ್ಲಾಧಿಕಾರಿ ಜನರ ಸಮಸ್ಯೆ ಆಲಿಸದೆ ಗುತ್ತಿಗೆದಾರರಿಗೆ ಟವರ್ ನಿರ್ಮಾಣಕ್ಕೆ ಆದೇಶ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಉಡಾಫೆ ಉತ್ತರ

ಬೆಳ್ಳಂಬೆಳಗ್ಗೆ ಜಾಗದ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಇನ್ನಾ ಗ್ರಾಮದಲ್ಲಿ ಕೃಷಿ ಗದ್ದೆಯಲ್ಲಿ ಟವರ್ ನಿರ್ಮಾಣಕ್ಕೆ ಕಂಪನಿ ಅಧಿಕಾರಿಗಳು ಮುಂದಾಗಿದ್ದು, ಜನರು ವಿರೋಧ ವ್ಯಕ್ತಪಡಿಸಿದಾಗ ಕಂಪನಿ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ. ‘ನಾವು ಜಿಲ್ಲಾಧಿಕಾರಿಗಳ ಆದೇಶದಂತೆ ಕೆಲಸ ಮಾಡುತ್ತೇವೆ. ನಿಮ್ಮಿಂದ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಜಾಗದ ಮಾಲೀಕರಿಗೆ ಉತ್ತರ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ನರಸಪ್ಪ, ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಪ್ರಸನ್ನ, ಗ್ರಾಮಕರಣಿಕ ಹನುಮಂತಪ್ಪ, ಗ್ರಾಮಸ್ಥರಾದ ಅಮರನಾಥ್ ಶೆಟ್ಟಿ, ಗ್ರಾಪಂ ಸದಸ್ಯ ಚಂದ್ರಹಾಸ್ ಶೆಟ್ಟಿ, ಗ್ರಾಮಸ್ಥರು ಉಪಸ್ಥಿತರಿದ್ದರು.

250ಕ್ಕೂ ಅಧಿಕ ಕುಟುಂಬಕ್ಕೆ ತೊಂದರೆ

ಇನ್ನಾ ಗ್ರಾಮದ 8 ಕಡೆ ಟವರ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಈ ಪೈಕಿ ಕೆಲವೊಂದು ಸರ್ಕಾರಿ ಜಾಗದಲ್ಲಿ ಇನ್ನೂ ಕೆಲವು ಖಾಸಗಿ ಜಾಗದಲ್ಲಿ ನಿರ್ಮಾಣವಾಗಲಿದೆ. ಜಾಗದ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೆ ಕಾಮಗಾರಿ ನಡೆಯುತ್ತಿದೆ. ವಿದ್ಯುತ್ ಲೈನ್ ಹಾದು ಹೋಗುವ ಪ್ರದೇಶದ 250ಕ್ಕೂ ಅಧಿಕ ಕುಟುಂಬಗಳಿಗೆ ಇದರಿಂದ ತೊಂದರೆಯಾಗಲಿದೆ. ಇನ್ನಾ ಗ್ರಾಮದ ಕೃಷಿಕರ ಹಾಗೂ ಬಡಪಾಯಿ ಕುಟುಂಬದ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಜಿಪಂ ನಿಕಟಪೂರ್ವ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ ಆರೋಪಿಸಿದರು. ಇನ್ನಾ ಗ್ರಾಪಂ ಸದಸ್ಯ ದೀಪಕ್ ಕೋಟ್ಯಾನ್ ಮಾತನಾಡಿ, ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಪದೇ ಪದೆ ಟವರ್ ನಿರ್ಮಾಣಕ್ಕೆ ಆದೇಶ ಮಾಡುತ್ತಿದ್ದಾರೆ. ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಮುಂದೆ ಉಗ್ರ ರೀತಿಯ ಹೋರಾಟ ಮಾಡುವ ಅನಿವಾರ್ಯವಿದೆ ಎಂದರು.

ರೂಟ್ ಬದಲಾಯಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಕೃಷಿಭೂಮಿಗೆ ಅಪಾರ ಹಾನಿಯಾಗುತ್ತಿದ್ದು, ಬಡಪಾಯಿ ಕೃಷಿಕರು ಜೀವನ ನಡೆಸುವುದು ಹೇಗೆ? ಯಾವುದೇ ಕಾರಣಕ್ಕೂ ಟವರ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಇಲ್ಲಿವರೆಗೆ ತಾಳ್ಮೆಯಿಂದ ಸಹಕಾರ ನೀಡಿದ್ದೇವೆ. ಮುಂದೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.-ರೇಷ್ಮಾ ಉದಯ್ ಶೆಟ್ಟಿ, ಜಿಪಂ ನಿ.ಪೂ. ಸದಸ್ಯೆ
ಜಿಲ್ಲಾಧಿಕಾರಿ ಸ್ಥಳ ವೀಕ್ಷಣೆ ಮಾಡದೆ ಆದೇಶ ಮಾಡುತ್ತಾರೆ. ಇಲ್ಲಿ ಟವರ್ ನಿರ್ಮಾಣವಾದಲ್ಲಿ ಹಲವಾರು ಕೃಷಿಕರು ಹಾಗೂ ಬಡಪಾಯಿ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಟವರ್ ನಿರ್ಮಿಸಲು ಬಿಡುವುದಿಲ್ಲ. ನಮ್ಮ ಮನವಿಗೆ ಸ್ಪಂದಿಸದ ಜಿಲ್ಲಾಧಿಕಾರಿಗಳ ವಿರುದ್ಧ ಹೋರಾಟ ಮಾಡುವ ಅನಿವಾರ್ಯ ಸ್ಥಿತಿ ಬಂದಿದೆ.-ದೀಪಕ್ ಕೋಟ್ಯಾನ್, ಅಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್
ನೋಟಿಸ್ ನೀಡಿ ಮತ್ತೆ 7 ದಿನಗಳ ಕಾಲಾವಕಾಶ ನೀಡುವಂತೆ ಕಂಪನಿಗೆ ತಿಳಿಸಿದ್ದೇವೆ. ಬಳಿಕ ಕಾಮಗಾರಿ ಜಿಲ್ಲಾಧಿಕಾರಿಗಳ ಆದೇಶದಂತೆ ನಡೆಯಲಿದೆ.-ನರಸಪ್ಪ, ಕಾರ್ಕಳ ತಹಸೀಲ್ದಾರ್