ಕೂಡ್ಲಿಗಿ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ರಾಜ್ಯ ರೈತ ಸಂಘ (ಹುಚ್ಚವನಹಳ್ಳಿ ಮಂಜುನಾಥ) ಬಣದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಬಾಣದ ಕೃಷ್ಣ, ಬಾಣದ ಮಾರುತಿ, ಜಿಲ್ಲಾಧ್ಯಕ್ಷ ಬಣಕಾರ ಬಸವರಾಜ, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ.ಶೇಖಪ್ಪ, ತಾಲೂಕು ಉಪಾಧ್ಯಕ್ಷ ಫಯಾಜ್ ಇದ್ದರು. 
ಜಿಲ್ಲೆ

ವಿದ್ಯುತ್ ಮೇನ್ ಲೈನ್ ತೆರವುಗೊಳಿಸಿ

Kopala - Desk - Eraveni

ಕೂಡ್ಲಿಗಿ: ಹುಲಿಕೆರೆ ಬಳಿ ಜಮೀನಿನಲ್ಲಿ ರೈತರ ಅನುಮತಿ ಪಡೆಯದೆ ಅಕ್ರಮವಾಗಿ ಪವನ ಶಕ್ತಿ ವಿದ್ಯುತ್ ಮೇನ್ ಲೈನ್ ಅಳವಡಿಸಲಾಗುತ್ತಿದ್ದು, ತೆರವುಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ (ಹುಚ್ಚವನಹಳ್ಳಿ ಮಂಜುನಾಥ ಬಣ) ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಬಾಣದ ಕೃಷ್ಣ ಮಾತನಾಡಿ, ಹಿರೇಕುಂಬಳಗುಂಟೆ ಹಾಗೂ ಹುಲಿಕೆರೆ ಗ್ರಾಮದಲ್ಲಿ ಪವನ ವಿದ್ಯುತ್ ಖಾಸಗಿ ಕಂಪನಿ ಸ್ಥಳೀಯ ಗ್ರಾಪಂನಿಂದ ಪರವಾನಗಿ ಪಡೆಯದೆ ಮೇನ್ ಲೈನ್ ಅಳವಡಿಸಿದೆ. ಸರ್ಕಾರ ಸೂಚಿಸಿದ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ರೈತರು ಅಡಿಕೆ, ತೆಂಗು, ನಿಂಬೆ ತೋಟಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ.

ಮನೆಗಳ ಮೇಲೆ ಅಧಿಕ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಹಾದು ಹೋಗುವಂತೆ ಹಾಕಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ವಿಜಯನಗರ ಡಿಸಿ ಕಚೇರಿವರೆಗೂ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ್, ಜಿಲ್ಲಾಧ್ಯಕ್ಷ ಬಣಕಾರ ಬಸವರಾಜ, ಹೊಸಪೇಟೆ ತಾಲೂಕು ಅಧ್ಯಕ್ಷ ಬಿ.ಶೇಖಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಬಾಣದ ಮಾರುತಿ, ತಾಲೂಕು ಉಪಾಧ್ಯಕ್ಷ ಫಯಾಜ್, ಹೊಸಹಳ್ಳಿ ಹೋಬಳಿ ಅಧ್ಯಕ್ಷ ಹುಲಿಕೆರೆ ಮಾರಪ್ಪ, ಪ್ರಮುಖರಾದ ಓಬಳೇಶ್, ಶಿವಪ್ರಕಾಶ್, ನವೀನ್ ಇದ್ದರು.