ಗಂಗಾವತಿ: ಗ್ರಾಹಕ ಬಳಕೆ ವಿದ್ಯುತ್ ಬಿಲ್ ಏರಿಕೆ ಖಂಡಿಸಿ ಜುಲಾಯಿ ನಗರದ ನಿವಾಸಿಗಳು ಜೆಸ್ಕಾಂ ಎಇಇ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ಎಇಇ ಕೆ.ವೀರೇಶ್‌ಗೆ ಮನವಿ ಸಲ್ಲಿಸಿ, ಬಿಲ್ ಹೆಚ್ಚಳದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಬಿಲ್ ಕೇಳಿದ್ದಕ್ಕೆ ಜೆಸ್ಕಾಂ ಅಧಿಕಾರಿ ಮೇಲೆ ಹಲ್ಲೆ
ಗ್ರಾಹಕ ಬಳಕೆ ವಿದ್ಯುತ್ ಬಿಲ್ ಏಕಾಏಕಿ ಹೆಚ್ಚಳವಾಗಿದ್ದು, ಶೇ.150 ಹೊರೆಯಾಗಿದೆ. ನಾವು ಬಳಸಿದ ವಿದ್ಯುತ್ ಪ್ರಮಾಣ ಮತ್ತು ಯೂನಿಟ್ ದರ ತಾಳೆ ಹಾಕಿದರೂ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಬಿಲ್ ಹೆಚ್ಚಳದ ಬಗ್ಗೆ ವಿದ್ಯುತ್ ಸಿಬ್ಬಂದಿಯತ್ತ ಉತ್ತರವಿಲ್ಲ. ದುಡಿಯುವ ವರ್ಗದವರೇ ಹೆಚ್ಚಾಗಿರುವ ವಾರ್ಡ್‌ನಲ್ಲಿ ಏಕಾಏಕಿ ಬಿಲ್ ಹೆಚ್ಚಳದಿಂದ ಜನರಿಗೆ ತೊಂದರೆಯಾಗಿದೆ.
ವಿದ್ಯುತ್ ಫ್ರೀ ಭಾಗ್ಯ ಕಲ್ಪಿಸಿದ ರಾಜ್ಯ ಸರ್ಕಾರ, ಬಿಲ್ ಹೆಚ್ಚಳದ ಮೂಲಕ ಜನರೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಪರಿಶೀಲಿಸುವವರೆಗೂ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ನಿವಾಸಿಗಳಾದ ವೆಂಕಟೇಶ ಧೂಳಾ, ತಿಪ್ಪಣ್ಣ, ಶೋಭಾ, ಶಾಂತಮ್ಮ, ಲೀಲಾವತಿ, ಮಂಗಳಮ್ಮ, ಎಂ.ಗೌರಮ್ಮ, ಎಂ.ರೇವತಿ ಇತರರು ಆಕ್ರೋಶ ವ್ಯಕ್ತಪಡಿಸಿದರು.