ವಿಜಯಪುರ: ಭೀಕರ ಬರದಿಂದ ತತ್ತರಿಸುತ್ತಿರುವ ರೈತರಿಗೆ ಸರ್ಕಾರ ಅನಿಯಮಿತ ಲೋಡ್ ಶೆಡ್ಡಿಂಗ್ ಮೂಲಕ ಗಾಯದ ಮೇಲೆ ಬರೆ ಎಳೆದಿದೆ….!
ಹೌದು, ವಿದ್ಯುತ್ ಅಭಾವದಿಂದಾಗಿ ಅಕ್ಷರಶಃ ನಲುಗಿರುವ ಜಿಲ್ಲೆಯ ರೈತರು ಇದೀಗ ಬೆಳೆ ಉಳಿಸಿಕೊಳ್ಳಲು ನಾನಾ ಕಸರತ್ತು ನಡೆಸಿದ್ದಾರೆ. ಮೊದಲೇ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಇದೀಗ ವಿದ್ಯುತ್ ಅಭಾವ ನರಕ ಯಾತನೆ ಸೃಷ್ಠಿಸುತ್ತಿದೆ. ಹೀಗಾಗಿ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ರೈತರು ಸರ್ಕಸ್ ನಡೆಸಿದ್ದಾರೆ.
ಮಳೆ ಬಂದಿಲ್ಲ, ಜಲಮೂಲಗಳೂ ಬತ್ತುತ್ತಿವೆ, ಅಲ್ಲಲ್ಲಿ ಸಂಗ್ರಹವಿರುವ ಅಲ್ಪ ಪ್ರಮಾಣದ ನೀರು ಬಳಸಿಕೊಳ್ಳೋಣ ಎಂದರೆ ವಿದ್ಯುತ್ ವ್ಯತ್ಯಯ ಗುಮ್ಮ ಬೇರೆ ಕಾಡುತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಕೃಷಿ ಪಂಪ್‌ಸೆಟ್‌ಗಳು ಬಂದ್ ಬಿದ್ದಿವೆ. ಅತ್ತ ಬೆಳೆದು ನಿಂತ ಪೈರು ನೀರಿಲ್ಲದೇ ಬಾಡುತ್ತಿದೆ. ಇದನ್ನು ಕಂಡು ಮಮ್ಮಲ ಮರಗುತ್ತಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಹೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದಾರೆ. ಎಲ್ಲ ಹೋರಾಟದ ಬಳಿಕವೂ ವ್ಯವಸ್ಥೆ ಬದಲಾಗದ ಹಿನ್ನೆಲೆ ಅನಿವಾರ್ಯವಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ.
ಹೊಲಗದ್ದೆಗಳಲ್ಲಿರುವ ಬಾವಿ, ಹೊಂಡ, ಚೆಕ್‌ಡ್ಯಾಂ, ಕಾಲುವೆಗಳಲ್ಲಿ ಸಂಗ್ರಹಗೊಂಡಿರುವ ನೀರನ್ನು ಬಿಂದಿಗೆ ಮೂಲಕ ಹೊತ್ತು ತಂದು ಬೆಳೆಗಳಿಗೆ ನೀರುಣಿಸಲಾಗುತ್ತಿದೆ. ಅದಕ್ಕಾಗಿ ಮನೆಯವರೆಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೆ. ಸಾಲದೆಂಬಂತೆ ಕೂಲಿಯಾಳುಗಳ ಮೂಲಕ ನೀರುಣಿಸುತ್ತಿದ್ದಾರೆ.
ಕೆಲವು ರೈತರು ಜನರೇಟರ್, ಟ್ರಾೃಕ್ಟರ್, ಬುಲೆಟ್ ಬೈಕ್ ಮತ್ತಿತರ ಡಿಸೇಲ್ ಇಂಜಿನ್ ಬಳಸಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಅದಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಾರೆ. ಶುಕ್ರವಾರ ವಿಜಯಪುರ ನಗರ ಹೊರವಲಯದ ಕಸಬಾ ಪ್ರದೇಶಕ್ಕೆ ಅಂಟಿಕೊಂಡಿರುವ ಜಮೀನೊಂದರಲ್ಲಿ ರಾಜು ಹಜೇರಿ ಎಂಬ ರೈತ ತೊಗರಿ, ಕಡಲೆ, ಜೋಳ ಮತ್ತಿತರ ಬೆಳೆಗಳನ್ನು ಉಳಿಸಿಕೊಳ್ಳಲು ಜನರೇಟರ್ ಬಳಸಿದ್ದು ಕಂಡು ಬಂತು. ಈ ಬಗ್ಗೆ ವಿಚಾರಿಸಿದರೆ ಇಂಥ ದೃಶ್ಯ ಈಗ ಸಾಮಾನ್ಯವೆಂಬಂತೆಯೂ, ಸರ್ಕಾರದ ಅವ್ಯವಸ್ಥೆ ಬಗ್ಗೆ ಆಕ್ರೋಶವೂ ವ್ಯಕ್ತಪಡಿಸಿದರು.