ಜಿಲ್ಲೆ

ಫುಟ್‌ಪಾತ್ ಮಧ್ಯೆ ವಿದ್ಯುತ್ ಕಂಬ : ಹೆದ್ದಾರಿ ಕಾಮಗಾರಿ ಅವಾಂತರ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನವೀಕರಣ ಕಾರ್ಯದ ಭಾಗವಾಗಿ ಸರ್ವಿಸ್ ರಸ್ತೆಯ ಉದ್ದಕ್ಕೂ ನಿರ್ಮಿಸಲಾಗುತ್ತಿರುವ ಪಾದಚಾರಿ ಮಾರ್ಗಗಳು ಅಪಾಯಕಾರಿಯಾಗುವ ಆತಂಕವಿದೆ. ತಲಪ್ಪಾಡಿಯಿಂದ ಕಾಸರಗೋಡಿನವರೆಗೆ ನೂರಾರು ಸ್ಥಳಗಳಲ್ಲಿ ಪಾದಚಾರಿ ಮಾರ್ಗದ ಮಧ್ಯದಲ್ಲಿ ವಿದ್ಯುತ್ ಕಂಬಗಳು ವಿಲೇವಾರಿಗೊಳ್ಳದೆ ಹಾಗೆಯೇ ಬಾಕಿ ಉಳಿದುಕೊಂಡು ಆತಂಕಮೂಡಿಸಿದೆ. ಇದನ್ನು ಬದಲಾಯಿಸಲಾಗುವುದೆಂದು ಹೇಳಲಾಗಿದ್ದರೂ ಈ ವರೆಗೂ ಬದಲಾಯಿಸಿಲ್ಲ.

ಪಾದಚಾರಿ ಮಾರ್ಗಕ್ಕೆ ಪ್ರಸ್ತುತ ಇಂಟರ್‌ಲಾಕ್ ಹಾಕಲಾಗಿದ್ದು, ಇನ್ನು ವಿದ್ಯುತ್ ಕಂಬ ಸ್ಥಳಾಂತರಿಸಬೇಕಾದರೆ ಮತ್ತೆ ಇಂಟರ್‌ಲಾಕ್ ತೆಗೆಯಬೇಕು. ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಪಾದಚಾರಿಗಳಿಗೆ ಅಪಾಯ ತರುವ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಬಸ್ ಹತ್ತಲು ಆತುರದಿಂದ ಓಡುವಾಗ ಕಂಬಗಳು ಬಡಿದು ಅವಘಡಗಳಾಗುವ ಸಾಧ್ಯತೆ ಇದೆ. ಅಸುರಕ್ಷಿತ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕನಿಷ್ಠ ಬಸ್ ನಿಲ್ದಾಣ ಪರಿಸರದಲ್ಲಾದರೂ ಪಾದಚಾರಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಕೆಲಸ ಪೂರ್ಣಗೊಳಿಸಬೇಕು ಎಂಬುದು ಜನರ ಅಭಿಪ್ರಾಯ. ಪಾದಚಾರಿ ಮಾರ್ಗದ ನಿರ್ಮಾಣವು ಅನೇಕ ಸ್ಥಳಗಳಲ್ಲಿ ವಿಳಂಬಗೊಳ್ಳುತ್ತಿದೆ.

ಹೆದ್ದಾರಿ ಬದಿಯ ಪಾದಚಾರಿ ಮಾರ್ಗದಲ್ಲಿರುವ ಕಂಬಗಳು ತೀವ್ರ ತೊಂದರೆ ಸೃಷ್ಟಿಸುತ್ತಿವೆ. ಮಕ್ಕಳು, ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗುತ್ತಿದ್ದು, ಈಗಲೇ ಹಲವಾರು ಮಂದಿ ಅವಘಡಕ್ಕೊಳಗಾಗಿದ್ದಾರೆ. ಅಧಿಕೃತರು ಶೀಘ್ರ ಕ್ರಮ ಕೈಗೊಳ್ಳಬೇಕು. -ಗೋಪಾಲಕೃಷ್ಣ ಕುಂಬಳೆ, ಪುತ್ತೂರು