ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಕೆಸರುಗದ್ದೆ ಕೂಟ ನಡೆಯುತ್ತಿರುವಾಗ ನೀರು ತುಂಬಿದ್ದ ಗದ್ದೆಗೆ ವಿದ್ಯುತ್ ಕಂಬ ಮುರಿದು ಬಿದ್ದರೂ ಯಾವುದೇ ಹಾನಿ ಸಂಭವಿಸದೆ ಜನರು ಪಾರಾದ ಘಟನೆ ಸಿದ್ದಕಟ್ಟೆ ಕೊನೆರಬೆಟ್ಟುವಿನಲ್ಲಿ ನಡೆದಿದ್ದು, ಇದು ಇಲ್ಲಿನ ದೈವಗಳ ಕಾರಣಿಕ ಎಂದು ಸ್ಥಳೀಯರು ನಂಬಿದ್ದಾರೆ.
ಸಿದ್ದಕಟ್ಟೆ ಬಂಟರ ಸಂಘದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸುತ್ತಿದ್ದು, ಕೂಟದ ಮೊದಲು ಕೊನೆರಬೆಟ್ಟು ಸ್ಥಳದ ದೈವಗಳಿಗೆ ಪರ್ವ ನಡೆಸಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಈ ಬಾರಿಯೂ ಕೂಟದ ಮೊದಲು ಪ್ರಾರ್ಥನೆ ಸಲ್ಲಿಸಲಾಗಿತ್ತು.
ಕ್ರೀಡಾಕೂಟ ನಡೆಯುವ ಗದ್ದೆ ಮೇಲ್ಭಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು, ಇದನ್ನು ಕಂಡ ಆಯೋಜಕರು ಕ್ರೀಡಾಕೂಟ ನಡೆಸುವ ದಿನ ಲೈನ್‌ನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮನವಿ ಮಾಡಿ ಲೈನ್ ಕಟ್ ಮಾಡಿಸಿದ್ದರು. ಭಾನುವಾರ ಕ್ರೀಡಾಕೂಟ ನಡೆಯುವಾಗ ಭಾರಿ ಗಾಳಿ ಬೀಸಿ ವಿದ್ಯುತ್ ಕಂಬ ತುಂಡಾಗಿ ತಂತಿ ಸಹಿತ ಗದ್ದೆಗೆ ಬಿದ್ದಿದೆ. ಗದ್ದೆಯಲ್ಲಿ ಮಕ್ಕಳ ಸಹಿತ ಸುಮಾರು 500ರಷ್ಟು ಜನ ಸೇರಿದ್ದರು. ಆದರೆ ಮೊದಲೇ ಲೈನ್ ಕಟ್ ಮಾಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆಯೋಜಕರಿಗೆ ಜಾಗದ ದೈವಗಳು ಮೊದಲೇ ಸೂಚನೆ ನೀಡಿದ್ದಿರಬಹುದು. ತುಳುನಾಡಿನ ದೈವದ ಕಾರಣಿಕ ಇರುವುದಕ್ಕೆ ಇದು ಸ್ಪಷ್ಟ ನಿದರ್ಶನವೆಂದು ಆಯೋಜಕರು ತಿಳಿಸಿದ್ದಾರೆ.