ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಮೈಸೂರು ಜಿಲ್ಲೆ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಡಿ.ದೇವರಾಜ ಅರಸು ಅವರಿಂದ ಹೆಸರು ಮಾಡಿದ್ದ ಜಿಲ್ಲೆ, ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಮಾತ್ರಲ್ಲದೆ, ದೇಶದ ಗಮನವನ್ನೇ ಸೆಳೆದಿತ್ತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದಾಗಲೂ ಸದ್ದು ಮಾಡಿತ್ತು. ಮತ್ತೆ ಈಗ ಅವರು ಎಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಚರ್ಚೆ ಆರಂಭಗೊಂಡಿದೆ. ಹಿಂದಿನಿಂದಲೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ನಡುವೆಯೇ ಪೈಪೋಟಿ ನಡೆದುಕೊಂಡು ಬರುತ್ತಿರುವ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಪುಟಿದೇಳುವಂತೆ ಮಾಡಲು ನಾಯಕರು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಒಟ್ಟು 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರಸ್ತುತ ಮೂವರು ಬಿಜೆಪಿ, ತಲಾ ನಾಲ್ವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿದ್ದಾರೆ.
ಚಾಮುಂಡೇಶ್ವರಿಗೆ ಜಿಟಿಡಿ
ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಣಕ್ಕಿಳಿದಿದ್ದರಿಂದ ರಾಜ್ಯದ ಗಮನ ಸೆಳೆದಿದ್ದ ಚಾಮುಂಡೇಶ್ವರಿ ಕ್ಷೇತ್ರ ಈ ಬಾರಿ ಜಿ.ಟಿ.ದೇವೇಗೌಡರಿಂದಾಗಿ ಚರ್ಚೆಯಲ್ಲಿದೆ. ಜೆಡಿಎಸ್ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿರುವ ಜಿಟಿಡಿ, ಇದೇ ಕ್ಷೇತ್ರದಿಂದ ಕಣಕ್ಕಿಳಿಯುವುದು ನಿಶ್ಚಿತವಾದರೂ ಯಾವ ಪಕ್ಷ ಎನ್ನುವುದು ನಿರ್ಧಾರವಾಗಿಲ್ಲ. ಹಿಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯನ್ನೇ ಸೋಲಿಸಿದ್ದರೂ ಜೆಡಿಎಸ್ನಲ್ಲಿ ಸೂಕ್ತ ಮನ್ನಣೆ ನೀಡದೆ ತನ್ನನ್ನು ಕಡೆಗಣಿಸಲಾಗಿದೆ ಎನ್ನುವ ಮುನಿಸು ಅವರಲ್ಲಿದೆ. ಕ್ಷೇತ್ರದಲ್ಲಿ ಇತರ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಜಿ.ಟಿ.ದೇವೇಗೌಡರ ನಿರ್ಧಾರದ ಮೇಲೂ ನಿಂತಿದೆ. ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಸಿದ್ದರಾಮಯ್ಯ ಘೊಷಣೆ ಮಾಡಿರುವುದರಿಂದ ಕಾಂಗ್ರೆಸ್ನಿಂದ ಹೊಸ ಅಥವಾ ಅಚ್ಚರಿ ಅಭ್ಯರ್ಥಿ ಕಣಕ್ಕಳಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಎ.ಹೇಮಂತಕುಮಾರ್ಗೌಡ, ಎಂ.ಅಪ್ಪಣ್ಣ, ಗೋಪಾಲರಾವ್ ಆಕಾಂಕ್ಷಿಗಳಾಗಿದ್ದಾರೆ.
ರಾಮ-ಸೋಮರ ಕದನ
ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪೈಪೋಟಿ ನೀಡುತ್ತಾ ಬರುತ್ತಿವೆ. ಬಿಜೆಪಿಯಿಂದ ಶಾಸಕ ಎಸ್.ಎ.ರಾಮದಾಸ್ ಅವರೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಮದಾಸ್ ಅವರನ್ನು ಹತ್ತಿರ ಕರೆದು ನೀಡಿದ ‘ಪ್ರೀತಿಯ ಗುದ್ದು’ ಪಕ್ಷದಲ್ಲಿ ಅವರಿಗಿದ್ದ ಕೆಲವು ಅಡೆತಡೆಗಳನ್ನು ನಿವಾರಿಸಿ ಟಿಕೆಟ್ ಖಚಿತಪಡಿಸಿದಂತಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಈ ಬಾರಿಯೂ ತಮ್ಮ ‘ಗುರು’ ಸಿದ್ದರಾಮಯ್ಯ ಮೂಲಕ ಟಿಕೆಟ್ ಗಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಈ ಮಧ್ಯೆ, ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್ಕುಮಾರ್ ತಮ್ಮ ಮಾವ, ಭದ್ರಾವತಿ ಶಾಸಕ ಸಂಗಮೇಶ್ ಪ್ರಭಾವ ಬಳಸಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಆಕಾಂಕ್ಷಿಯಾಗಿದ್ದಾರೆ.
ಒಕ್ಕಲಿಗರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಒಕ್ಕಲಿಗ ಸಮುದಾಯದ ಪ್ರಭಾವ ಇರುವ ಚಾಮರಾಜ ಕ್ಷೇತ್ರದಲ್ಲಿ ಶಾಸಕ ಎಲ್.ನಾಗೇಂದ್ರ ಈ ಬಾರಿಯೂ ಬಿಜೆಪಿ ಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ವಾಸು ಮತ್ತು ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡರ ಬಂಧು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಪಕ್ಷಗಳಲ್ಲಿ ಉಂಟಾದ ಆಂತರಿಕ ಕಲಹ ವ್ಯತಿರಿಕ್ತವಾಗಿ, ಅದರ ಲಾಭ ಪಡೆದು ನಾಗೇಂದ್ರ ಕ್ಷೇತ್ರವನ್ನು ಮರಳಿ ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದ್ದರು. ಸದ್ಯ ಪ್ರೊ.ಕೆ.ಎಸ್.ರಂಗಪ್ಪ ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವುದರಿಂದ ಜೆಡಿಎಸ್ ಹೊಸ ಅಭ್ಯರ್ಥಿ ಹುಡುಕಾಟ ನಡೆಸಿದೆ. ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ಗೌಡ ಜೆಡಿಎಸ್ನಲ್ಲಿ ಉಳಿಸಿದರೆ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ನಿಂದ ವಾಸು ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಕಳೆದ ಬಾರಿ ಪಕ್ಷೇತರವಾಗಿ ಕಣಕ್ಕಿಳಿದಿದ್ದ ಕೆ.ಹರೀಶ್ಗೌಡ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಮಾಲವಿಕಾ ಗುಬ್ಬಿವಾಣಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಗಮನ ಸೆಳೆಯಲಿದೆಯೇ ಹುಣಸೂರು?
ಹಿಂದೆ ಡಿ.ದೇವರಾಜ ಅರಸು ಪ್ರತಿನಿಧಿಸಿದ್ದ ಹುಣಸೂರು ಕ್ಷೇತ್ರ ರಾಜಕೀಯ ಕುತೂಹಲಕ್ಕೆ ಸಾಕ್ಷಿಯಾಗುತ್ತಲೇ ಇದೆ. ಕಳೆದ ಚುನಾವಣೆಯಲ್ಲಿ ಪಕ್ಷ ಹಾಗೂ ಕ್ಷೇತ್ರ ಬದಲಾಯಿಸಿದ್ದ ಎಚ್.ವಿಶ್ವನಾಥ್ ಈ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಗೆದ್ದು ಶಾಸಕರಾಗಿದ್ದರು. ಆದರೆ ಆಪರೇಷನ್ ಕಮಲದಿಂದಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಸ್ಪರ್ಧಿಸಿ ಸೋತರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್.ಪಿ.ಮಂಜುನಾಥ್ ಗೆಲುವು ಸಾಧಿಸಿದ್ದು, ಈ ಬಾರಿಯೂ ಅವರಿಗೆ ಕೈ ಟಿಕೆಟ್ ದೊರೆಯಲಿದೆ. ಈ ನಡುವೆ, ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಹಂಬಲ ಇಟ್ಟುಕೊಂಡಿರುವ ಸಿದ್ದರಾಮಯ್ಯ ‘ಸುರಕ್ಷಿತ’ ಎಂಬ ಕಾರಣಕ್ಕೆ ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳಿವೆ. ಜೆಡಿಎಸ್ನಿಂದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ಗೌಡ, ಇವರು ಪಕ್ಷಾಂತರ ಮಾಡಿದರೆ ಪ್ರಜ್ವಲ್ ರೇವಣ್ಣ ಹೆಸರು ಕೇಳಿಬರುತ್ತಿದೆ. ದೇವರಹಳ್ಳಿ ಸೋಮಶೇಖರ್, ದೇವರಾಜ ಒಡೆಯರ್ ಕೂಡ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ವಕೀಲ ಯೋಗಾನಂದಕುಮಾರ್, ಪಕ್ಷಾಂತರ ಮಾಡಿದರೆ ಜಿ.ಡಿ.ಹರೀಶ್ಗೌಡ ಅವರಿಗೆ ಟಿಕೆಟ್ ಎನ್ನಲಾಗುತ್ತಿದೆ.
ಮುಂದುವರಿದ ವಂಶಪಾರಂಪರ್ಯ
ಅಲ್ಪಸಂಖ್ಯಾತರೇ ನಿರ್ಣಾಯಕವಾಗಿರುವ ನರಸಿಂಹರಾಜ ಕ್ಷೇತ್ರದಲ್ಲಿ ವಂಶಪಾರಂಪರ್ಯ ನಡೆದು ಬಂದಿದ್ದು, ಒಂದೇ ಕುಟುಂಬದವರು ಹಲವು ವರ್ಷಗಳಿಂದ ಗೆಲ್ಲುತ್ತ ಬಂದಿದ್ದಾರೆ. ಕಾಂಗ್ರೆಸ್ನಿಂದ ಶಾಸಕ ತನ್ವೀರ್ಸೇಠ್ ಮುಸ್ಲಿಂ ಕೋಟಾದಲ್ಲಿ ಟಿಕೆಟ್ ಪಡೆಯುವುದು ವಾಡಿಕೆಯಾಗಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಲ್ಪಸಂಖ್ಯಾತರ ಮತ ಸೆಳೆಯುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಲು ಈ ಬಾರಿಯೂ ಸಿದ್ಧತೆ ಮಾಡಿಕೊಂಡಿದ್ದಾರೆ. ಜೆಡಿಎಸ್ನಿಂದ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಪ್ರಬಲ ಆಕಾಂಕ್ಷಿ ಯಾಗಿದ್ದಾರೆ. ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸಿದ್ದ ಬಿಜೆಪಿ, ಹಿಂದು ಅಭ್ಯರ್ಥಿ ಕಣಕ್ಕಿಳಿಸುತ್ತ ಬರುತ್ತಿದ್ದು, ಇತ್ತೀಚೆಗೆ ಬಿಜೆಪಿ ಸೇರಿದ ಸಂದೇಶ್ ನಾಗರಾಜು ಅವರ ಸಹೋದರ ಸಂದೇಶ್ ಸ್ವಾಮಿ ಅಥವಾ ಪುತ್ರ ಸಂದೇಶ್ ಟಿಕೆಟ್ ಬಯಸಿದ್ದಾರೆ.
ತಿ.ನರಸೀಪುರದಲ್ಲಿ ಹಳಬರ ಜತೆ ಹೊಸ ಮುಖ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮತ್ತೊಂದು ಕ್ಷೇತ್ರ ತಿ.ನರಸೀಪುರದಲ್ಲಿ ಜೆಡಿಎಸ್ನ ಅಶ್ವಿನ್ಕುಮಾರ್ ಶಾಸಕರಾಗಿದ್ದು, ಈ ಬಾರಿಯೂ ಜೆಡಿಎಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಪುತ್ರ ಸುನೀಲ್ ಬೋಸ್ಗೆ ಬಿಟ್ಟುಕೊಟ್ಟು ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಮಾಜಿ ಶಾಸಕ ಡಾ.ಭಾರತೀಶಂಕರ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ರಮೇಶ್ ಆಕಾಂಕ್ಷಿಗಳಾಗಿದ್ದು, ಹೊಸ ಮುಖಕ್ಕೆ ಮಣೆ ಹಾಕುವ ಸಾಧ್ಯತೆಯೂ ಇದೆ.
ವೈಯಕ್ತಿಕ ವರ್ಚಸ್ಸು ನಿರ್ಣಾಯಕ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ದಿ.ಚಿಕ್ಕಮಾದು ಅವರ ಪುತ್ರ ಅನಿಲ್ ಪ್ರಸ್ತುತ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅನಿಲ್ ಅವರಿಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ. ಜೆಡಿಎಸ್ನಲ್ಲಿ ಟಿಕೆಟ್ಗೆ ಪೈಪೋಟಿ ನಡೆದಿದ್ದು, ಕಳೆದ ಬಾರಿ ಪಕ್ಷಾಂತರ ಮಾಡಿ ಸೋತಿದ್ದ ಮಾಜಿ ಶಾಸಕ ಚಿಕ್ಕಣ್ಣ ಆಕಾಂಕ್ಷಿಯಾಗಿದ್ದಾರೆ. ‘ಅಪ್ಪಾಜಿ ಕ್ಯಾಂಟೀನ್’ ಸೇರಿ ಸಾಮಾಜಿಕ ಸೇವೆ ಆರಂಭಿಸುವ ಮೂಲಕ ಹುಲಿಯೂರುದುರ್ಗದ ಕ್ವಾರಿ ಉದ್ಯಮಿ ಕೆ.ಎಂ.ಕೃಷ್ಣನಾಯಕ ಕ್ಷೇತ್ರದಲ್ಲಿ ಸಂಚರಿಸಿ ಜೆಡಿಎಸ್ ಟಿಕೆಟ್ ಪಡೆಯುವ ಯತ್ನ ನಡೆಸಿದ್ದಾರೆ. ಬಿಜೆಪಿಯಲ್ಲೂ ಆಕಾಂಕ್ಷಿಗಳು ಹೆಚ್ಚಾಗಿದ್ದು, ಅಪ್ಪಣ್ಣ, ಸಿದ್ದರಾಜು, ಡಾ.ಕೃಷ್ಣಸ್ವಾಮಿ ಪೈಪೋಟಿ ನಡೆಸಿದ್ದಾರೆ. ಪೊಲೀಸ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ದೊರೆಸ್ವಾಮಿ ಆಮ್ ಆದ್ಮಿಯಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ.
ದಕ್ಷಿಣ ಕಾಶಿಯಲ್ಲಿ ಕುತೂಹಲ
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅಳಿಯ ಬಿ.ಹರ್ಷ ವರ್ಧನ್ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಕ್ಷೇತ್ರವನ್ನು ಪ್ರಥಮ ಬಾರಿಗೆ ಗೆದ್ದಿರುವ ಕಾರಣ ಹರ್ಷವರ್ಧನ್ಗೆ ಮತ್ತೊಮ್ಮೆ ಟಿಕೆಟ್ ಖಚಿತವಾಗಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿಯೂ ಸದ್ದಿಲ್ಲದೆ ಲಾಬಿ ನಡೆಸಿದ್ದಾರೆ. ಕಳಲೆ ಎನ್.ಕೇಶವಮೂರ್ತಿ ಕಳೆದ ಬಾರಿ ಸೋತಿದ್ದು, ಈ ಸಲ ಮತ್ತೆ ಅದೃಷ್ಟ ಪರೀಕ್ಷೆಗೆ ಆಕಾಂಕ್ಷಿಯಾಗಿದ್ದಾರೆ. ಇದಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಕಣಕ್ಕಿಳಿಯುವ ಕುರಿತು ಲೆಕ್ಕಾಚಾರ ನಡೆಸಿದ್ದಾರೆ. ಜೆಡಿಎಸ್ ಸಂದರ್ಭ ನೋಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಲಿದೆ.
ಪಿರಿಯಾಪಟ್ಟಣದಲ್ಲಿ ಅದೃಷ್ಟ ಯಾರಿಗೆ?
ಪಿರಿಯಾಪಟ್ಟಣ ಕ್ಷೇತ್ರ ಹಾಲಿ ಜೆಡಿಎಸ್ ತೆಕ್ಕೆಯಲ್ಲಿದ್ದು, ಕೆ.ಮಹದೇವು ಶಾಸಕರಾಗಿದ್ದಾರೆ. ಮುಂದಿನ ಚುನಾವಣೆ ಯಲ್ಲಿ ತನಗೆ ಅಥವಾ ಮೈಮುಲ್ ಅಧ್ಯಕ್ಷರಾಗಿರುವ ಪುತ್ರ ಪಿ.ಎಂ.ಪ್ರಸನ್ನ ಅವರಿಗೆ ಟಿಕೆಟ್ ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ನಿಂದ ಮಾಜಿ ಸಚಿವ ಕೆ.ವೆಂಕಟೇಶ್ ಇದ್ದರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ಗೌಡ ಸಹ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಎಚ್.ಸಿ. ಬಸವರಾಜು, ಮುಖಂಡರಾದ ಗಿರೀಶ್ ಉಪ್ಪಾರ್, ಕಲ್ಲನಹಳ್ಳಿ ಸೋಮಶೇಖರ್ ಆಕಾಂಕ್ಷಿಗಳು.
ಸಾರಾ ಜತೆ ಸೆಣಸಾಟ
ಕೆ.ಆರ್.ನಗರ ಸದ್ಯ ಜೆಡಿಎಸ್ ಹಿಡಿತದಲ್ಲಿದ್ದು, ಸಾ.ರಾ.ಮಹೇಶ್ ಶಾಸಕರಾಗಿದ್ದು, ಇವರೇ ಮುಂದೆಯೂ ಅಭ್ಯರ್ಥಿ. ಈ ಹಿಂದೆ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಗೆಲ್ಲುತ್ತಲೇ ಬಂದಿದ್ದ ಕೆ.ಆರ್.ನಗರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ ದಾಖಲೆ ಸಾ.ರಾ.ಮಹೇಶ್ ಅವರಿಗಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಕೃಪೆಯಿಂದ ಡಿ.ರವಿಶಂಕರ್ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದರು. ಈ ಬಾರಿಯೂ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಮಾಜಿ ಶಾಸಕ ಮಂಚನಹಳ್ಳಿ ಮಹದೇವು ಅವರ ಪುತ್ರಿ ಐಶ್ವರ್ಯಾ ಕೂಡ ಕಾಂಗ್ರೆಸ್ನಿಂದ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಅಷ್ಟಾಗಿ ಬೇರು ಬಿಟ್ಟಿಲ್ಲದಿರುವುದರಿಂದ ಸ್ವಸಾಮರ್ಥ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ವಾಡಿಕೆಯಾಗಿದೆ.
ವರುಣಕ್ಕಿಲ್ಲ ವಿಜಯೇಂದ್ರ
ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕಿಳಿಯದಿದ್ದರೆ ಶಾಸಕ ಡಾ.ಯತೀಂದ್ರ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಕಳೆದ ಬಾರಿ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎನ್ನುವ ಕಾರಣಕ್ಕೆ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಅರ್ಧಕ್ಕೆ ವಾಪಸ್ ಆಗಿದ್ದರಿಂದ ಅಭಿಮಾನಿಗಳು, ಕಾರ್ಯಕರ್ತರು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಾರಿ ವಿಜಯೇಂದ್ರ ಇಲ್ಲಿಂದಲೇ ಕಣಕ್ಕಿಳಿದು ಮೈಸೂರು ಭಾಗದಲ್ಲಿ ಬಿಜೆಪಿಗೆ ಬೆನ್ನೆಲುಬಾಗಲಿದ್ದಾರೆ ಎನ್ನಲಾಗಿತ್ತಾದರೂ ಶಿಕಾರಿಪುರದಿಂದ ಕಣಕ್ಕಿಳಿಸುವುದಾಗಿ ಯಡಿಯೂರಪ್ಪ ಅವರ ಘೊಷಣೆ ಹೊರಬೀಳುತ್ತಿದ್ದಂತೆ ಕುತೂಹಲ ತಣ್ಣಗಾಗಿದೆ. ಸದ್ಯದ ಲೆಕ್ಕಾಚಾರದಲ್ಲಿ ಬಿಜೆಪಿಯಿಂದ ಬಿಎಸ್ವೈ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ಮತ್ತೊಮ್ಮೆ ಆಕಾಂಕ್ಷಿಯಾಗಿದ್ದರೆ, ಕ್ಷೇತ್ರದಲ್ಲಿ ಅಷ್ಟು ಪ್ರಬಲವಾಗಿಲ್ಲದ ಜೆಡಿಎಸ್ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.