ಜಿಲ್ಲೆ

ಚುನಾವಣೆ ಬಹಿಷ್ಕಾರ ವಾಗ್ವಾದ

Avinash R

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಮಾಡ್ನೂರು 2ನೇ ವಾರ್ಡಿನ ಸಸ್ಪೇಟಿ-ಪಳನೀರು ವ್ಯಾಪ್ತಿಯ ಮತದಾರರು ಸಸ್ಪೇಟಿ-ಪಳನೀರು ಸಂಪರ್ಕ ರಸ್ತೆಯ ದುರಸ್ತಿ ಕಾರ್ಯ ನಡೆಸಿಲ್ಲ ಎಂಬ ಕಾರಣಕ್ಕೆ ಉಪಚುನಾವಣೆ ಬಹಿಷ್ಕರಿಸಿದ ವಿಚಾರ ಅರಿಯಡ್ಕ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ವಿಚಾರದಲ್ಲಿ ನಡೆದ ಆರೋಪ-ಪ್ರತ್ಯಾರೋಪಗಳಿಂದಾಗಿ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು.

ಅರಿಯಡ್ಕ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಡ್ನೂರು 2ನೇ ವಾರ್ಡಿನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸಸ್ಪೇಟಿ-ಪಳನೀರು ಭಾಗದ ಮತದಾರರು ಚುನಾವಣೆ ಬಹಿಷ್ಕರಿಸಿರುವುದು ಬೇಸರದ ವಿಚಾರ ಎಂದು ವಿಷಯ ಪ್ರಸ್ತಾಪಿಸಿದ ಸದಸ್ಯ ಹರೀಶ್ ರೈ ಜಾರತ್ತಾರು, ಇನ್ನಾದರೂ ಆ ಭಾಗದ ಸದಸ್ಯರು ರಸ್ತೆಯ ದುರಸ್ತಿಗೆ ಅನುದಾನ ಇಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಡ್ನೂರು ವಾರ್ಡಿನ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮೂಲೆ ಮತ್ತು ಜಯಂತಿ ಪಟ್ಟುಮೂಲೆ, ನಮ್ಮ ವಾರ್ಡಿನ ರಸ್ತೆಯನ್ನು ನಾವು ಕಡೆಗಣಿಸಿಲ್ಲ. ನಮಗೆ ಸಿಕ್ಕಿದ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿದ್ದೇವೆ. ಈಗಾಗಲೇ 15ನೇ ಹಣಕಾಸು ಯೋಜನೆಯಡಿ ರಸ್ತೆ ದುರಸ್ತಿಗೆ 10 ಸಾವಿರ ರೂ.ಇಡಲಾಗಿದ್ದು, ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎಂದರು. ಈ ವಿಚಾರದಲ್ಲಿ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪ ನಡೆಯಿತು.

ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಣಿಯಾಣಿ ರಸ್ತೆಯ ದುರಸ್ತಿಗೆ ರೂ.10 ಸಾವಿರ ಸಾಲದು. ಸ್ವಂತ ನಿಧಿಯಿಂದ 20 ಸಾವಿರ ರೂ.ಮತ್ತು ವಾರ್ಡಿನ 10 ಸಾವಿರ ರೂ.ಅನುದಾನ ಸೇರಿ ಒಟ್ಟು 30 ಸಾವಿರ ರೂ.ಅನುದಾನ ಬಳಸಿಕೊಂಡು ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸುವ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು.

ಮಾಡ್ನೂರು 2ನೇ ವಾರ್ಡಿನ ಉಪಚುನಾಚಣೆಯಲ್ಲಿ ಸದಸ್ಯರಾಗಿ ಆಯ್ಕೆಗೊಂಡಿರುವ ವಿನಯಕುಮಾರ್ ಅವರನ್ನು ಅಧ್ಯಕ್ಷ ಸಂತೋಷ್ ಮಣಿಯಾಣಿ ಅವರು ಶಾಲು ಹಾಕಿ ಸಭೆಗೆ ಬರಮಾಡಿಕೊಂಡರು. ಗ್ರಾ.ಪಂ.ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಸದಸ್ಯರಾದ ಸೌಮ್ಯ ಬಾಲಸುಬ್ರಹ್ಮಣ್ಯ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಭಾರತಿ ವಸಂತ್ ಕೌಡಿಚ್ಚಾರು, ಉಷಾರೇಖ ರೈ ಕೊಳ್ಳಾಜೆ, ವಿನಿತಾ ಬಳ್ಳಿಕಾನ, ಪ್ರವೀಣ್ ಅಮ್ಚಿನಡ್ಕ, ನಾರಾಯಣ ನಾಯ್ಕ ಚಾಕೋಟೆ, ಅನಿತಾ ಆಚಾರಿಮೂಲೆ, ಪುಷ್ಪಲತಾ ಮರತ್ತಮೂಲೆ, ಹೇಮಾವತಿ ಚಾಕೋಟೆ ಅವರು ಉಪಸ್ಥಿತರಿದ್ದು, ಅಭಿವೃದ್ಧಿ ವಿಚಾರಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡರು. ಪಿಡಿಒ ಸುನೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು.

ಕಾಡಾನೆಗಳ ಉಪಟಳ ತಡೆಗೆ ಆಗ್ರಹ

ಮಾಡ್ನೂರು ಗ್ರಾಮದ ವಿವಿಧ ಕಡೆಗಳಿಗೆ ಕಾಡಾನೆಗಳು ಬಂದು ಅಪಾರ ಕೃಷಿ ನಾಶ ಮಾಡುತ್ತಿರುವ ವಿಚಾರ ಪ್ರಸ್ತಾಪಿಸಿದ ಸದಸ್ಯ ಲೋಕೋಶ್ ಚಾಕೋಟೆ, ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಜಾಸ್ತಿಯಾಗತೊಡಗಿದೆ. ಕೆಲವು ದಿನಗಳ ಹಿಂದೆ ಅಮ್ಚಿನಡ್ಕ, ಅಂಕೊತ್ತಿಮಾರು ವ್ಯಾಪ್ತಿಯಲ್ಲಿ ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಕಾವು ಚಾಕೋಟೆ ಪರಿಸರಕ್ಕೂ ಬಂದು ತೆಂಗು, ಅಡಿಕೆ, ಬಾಳೆ ಕೃಷಿಗಳನ್ನು ಹಾನಿಗೊಳಿಸಿವೆ. ಕಾಡಾನೆಗಳಿಂದಾಗಿ ಒಂದೆಡೆ ಕೃಷಿ ಹಾನಿಯಾಗುತ್ತಿದ್ದು, ಮತ್ತೊಂದೆಡೆ ಜನತೆ ಭಯಭೀತರಾಗಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ಕಾಡಾನೆ ಹಾವಳಿಗೆ ಪೂರ್ಣವಿರಾಮ ಹಾಕಬೇಕು. ನಷ್ಟ ಸಂಭವಿಸಿರುವ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಕುರಿತು ಪಂಚಾಯಿತಿ ವತಿಯಿಂದ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಬೇಕು ಎಂದು ಲೋಕೇಶ್ ಚಾಕೋಟೆ ಆಗ್ರಹಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಈ ಕುರಿತು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.