ಕರಡಕಲ್ ಸಿದ್ಧಾರೂಢ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ವೇದಾಂತ ಪರಿಷತ್ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು. ಮಟಮಾರಿ ಜ್ಞಾನಾನಂದ ಶ್ರೀಗಳು, ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಮುಖಂಡರಾದ ಗಿರಿಮಲ್ಲನಗೌಡ, ರುದ್ರಪ್ಪ ಬ್ಯಾಗಿ, ಡಿ.ಬಿ.ಸೋಮನಮರಡಿ ಇತರರಿದ್ದರು. 
ಜಿಲ್ಲೆ

ವೃದ್ಧ ಪಾಲಕರ ಸೇವೆ ಮಾಡಿದರೆ ಪುಣ್ಯಪ್ರಾಪ್ತಿ

Kopala - Desk - Eraveni

ಲಿಂಗಸುಗೂರು; ಭಾರತೀಯ ಸನಾತನ ಪರಂಪರೆಯಲ್ಲಿ ತಂದೆ-ತಾಯಿ, ಗುರು ಹಿರಿಯರಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ನವ ದಂಪತಿಗಳು ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಸಮೀಪದ ಕರಡಕಲ್ ಸಿದ್ಧಾರೂಢ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ 23ನೇ ವೇದಾಂತ ಪರಿಷತ್ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ತಂದೆ-ತಾಯಿ, ವೃದ್ಧಾಪ್ಯ ಜೀವನ ನಡೆಸುವ ಹಿರಿಯರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿರುವುದು ಖೇದಕರ ಸಂಗತಿ.

ಮಕ್ಕಳನ್ನು ಹೆತ್ತು ಹೊತ್ತು ಕಷ್ಟಪಟ್ಟು ಶಿಕ್ಷಣವಂತರನ್ನಾಗಿಸಿ ಉಜ್ವಲ ಭವಿಷ್ಯ ರೂಪಿಸುವ ಪಾಲಕರು ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಿದರೆ ಪುಣ್ಯಪ್ರಾಪ್ತಿಯಾಗಲಿದೆ. ಶ್ರೀಮಠದಲ್ಲಿ ಸಾಂಸ್ಕೃತಿಕ ಭವನ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಸೇವಾ ಟ್ರಸ್ಟ್ ಮನವಿ ಮಾಡಿದ್ದು, ಕೆಕೆಆರ್‌ಡಿಬಿ ಅನುದಾನದಲ್ಲಿ ಸಿಸಿ ರಸ್ತೆಗೆ 20 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ ಮಾತನಾಡಿ, ಮಠ-ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರಿಗೆ ಆರ್ಥಿಕ ಹೊರೆ ನೀಗಿಸಲಿವೆ. ಕಳೆದ 23 ವರ್ಷಗಳಿಂದ ಶ್ರೀಮಠದಲ್ಲಿ ಧಾರ್ಮಿಕ ಮತ್ತು ಜಾತ್ರೋತ್ಸವ ನಡೆಸುವ ಜತೆಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತ ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಮಟಮಾರಿ ಜ್ಞಾನಾನಂದ ಶ್ರೀಗಳು, ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಮುಖಂಡರಾದ ಗಿರಿಮಲ್ಲನಗೌಡ, ರುದ್ರಪ್ಪ ಬ್ಯಾಗಿ, ಡಿ.ಬಿ.ಸೋಮನ ಮರಡಿ, ಬಸವರಾಜ ಮ್ಯಾಗೇರಿ, ಮೋಹನ್ ಗೋಸ್ಲೆ, ಸೋಮನಗೌಡ, ಶರಣಪ್ಪ, ಹನುಮಂತಪ್ಪ, ನಿಂಗಣ್ಣ ಗುರುಲಿಂಗಪ್ಪ, ರಾಜು ಮಹೇಂದ್ರಕರ ಇತರರಿದ್ದರು.