ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಶೈಕ್ಷಣಿಕ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನಿರ್ಣಾಯಕ ಘಟ್ಟ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನುರಿತರಲ್ಲಿ ಮಾರ್ಗದರ್ಶನ ಪಡೆದು ಸ್ಪಷ್ಟ ನಿರ್ಧಾರದೊಂದಿಗೆ ಮುನ್ನಡೆಯಬೇಕು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಕಾಪಿಕಾಡ್‌ನಲ್ಲಿ ಭಾನುವಾರ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮತ್ತು ಬ್ರಹ್ಮಶ್ರೀ ಮಹಿಳಾ ವೇದಿಕೆಯ 23ನೇ ವರ್ಷದ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾವಂತರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಉನ್ನತ ವ್ಯಾಸಂಗ ಪಡೆದು ಅತ್ಯುನ್ನತ ಹುದ್ದೆಯಲ್ಲಿರುವವರ ಪಾಲಕರು ವೃದ್ಧಾಶ್ರಮದಲ್ಲಿ ಜೀವನ ಸವೆಯುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯುವುದರ ಜತೆಗೆ ಹೆತ್ತವರ ತ್ಯಾಗದ ಬಗ್ಗೆ ತಿಳಿಯಬೇಕು ಎಂದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಡಿ.ಗೋಪಾಲ, ವೇದಿಕೆಯ ಗೌರವ ಸಲಹೆಗಾರ ಎ.ಜೆ.ಶೇಖರ್, ದಿನೇಶ್ ಕೆ.ಅತ್ತಾವರ, ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾ ಆನಂದ್ ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟು ಸ್ವಾಗತಿಸಿದರು. ಕೆ.ಟಿ.ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ಕರ್ಕೇರ ದತ್ತು ಮಕ್ಕಳ ಮಾಹಿತಿ ನೀಡಿದರು. ಆನಂದ ಕೆ.ಅಸೈಗೋಳಿ ಅಭಿನಂದನಾ ಭಾಷಣ ಮಾಡಿದರು. ಲಕ್ಷ್ಮಣ್ ಪೂಜಾರಿ ಅಭಿನಂದಿಸಲ್ಪಟ್ಟ ಮಕ್ಕಳ ಮಾಹಿತಿ ನೀಡಿದರು. ಸುರೇಖಾ ಹರೀಶ್ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ ಮತ್ತು ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ತನ್ವಿ ಎಸ್.ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು. 45 ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕರಿಸಲಾಯಿತು. 200 ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.