ಜಿಲ್ಲೆ

ಸಂಸ್ಕಾರ ಇಲ್ಲದ ಶಿಕ್ಷಣ ನಿಷ್ಪ್ರಯೋಜಕ

Avinash R

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಕೇಸರಿ ವಸ್ತ್ರ, ಮಾಲೆ ಧರಿಸಿದ ಕೂಡಲೇ ಹಿಂದು ಆಗುವುದಿಲ್ಲ. ಹೆತ್ತವರು ಮಕ್ಕಳ ಚಲನವಲನ ಗಮನಿಸಬೇಕು. ಇನ್ನೊಂದು ಧರ್ಮೀಯರನ್ನು ತೆಗಳುವ ಬದಲು ನಾವು ಸರಿ ದಾರಿಯಲ್ಲಿರಬೇಕು. ಎಷ್ಟು ಕಲಿತರೂ ಸಂಸ್ಕಾರ ಇಲ್ಲದಿದ್ದರೆ ನಿಷ್ಪ್ರಯೋಜಕ ಎಂದು ಉಪ್ಪಳ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ವಿಜಯ ಪಂಡಿತ್ ಹೇಳಿದರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ.30ರವರೆಗೆ ನಡೆಯಲಿರುವ ಬ್ರಹ್ಮಕಲಶ ಸಹಿತ ಶತ ಚಂಡಿಕಾಯಾಗದ 2ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಮುದಾಯದ ಮೇಲೆ ಗೌರವ, ಅಭಿಮಾನ ಬಂದರೆ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಡ್ರಗ್ಸ್ ಮಾಫಿಯಾದಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಸ್ಕಾರಭರಿತ ಶಿಕ್ಷಣ ಮನೆಯಲ್ಲೇ ನಡೆಯಬೇಕು. ಇತರ ಧರ್ಮೀಯರು ಗಲ್ಲಿ ಗಲ್ಲಿಗಳಲ್ಲಿ ಶಾಲೆ ತೆರೆಯುತ್ತಿರುವಾಗ ಹಿಂದುಗಳು ಈ ಕಾರ್ಯದಲ್ಲಿ ಮುಂದಾಗಬೇಕು ಎಂದರು. ಮಂಗಳೂರು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ನಮ್ಮ ಕೆಲಸ ಆಗಬೇಕಾದರೆ ಪ್ರಯತ್ನ ಅಗತ್ಯ. ಆಗ ಮಾತ್ರ ದೇವರ ಕೃಪೆ ಸಿಗುತ್ತದೆ. ದೇವರಲ್ಲಿ ನಂಬಿಕೆ ಬೇಕು. ಆದರೆ ಎಲ್ಲವೂ ದೇವರಿಂದ ಆಗುತ್ತದೆ ಎಂದು ಪ್ರಯತ್ನಪಡದೆ ಕೂರುವ ಮೂಢನಂಬಿಕೆ ಇರಬಾರದು ಎಂದರು. ಅಂಬಾವನದ ಪ್ರಧಾನ ಸಂಚಾಲಕ ಡಾ.ಅರುಣ್ ಉಳ್ಳಾಲ ಧಾರ್ಮಿಕ ಉಪನ್ಯಾಸ ನೀಡಿದರು. ಸದಸ್ಯೆ ರಶ್ಮಿ ಶಾಂತರಾಮ್ ಶೆಟ್ಟಿ, ರಾಮ್ ದಾಸ್ ಆಳ್ವ ಮಂಜನಾಡಿ, ಉದ್ಯಮಿ ಪ್ರಸಾದ್ ಕಡಬ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು, ಶತ ಚಂಡಿಕಾಯಾಗ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕಜೆ ಸ್ವಾಗತಿಸಿದರು. ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗ ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ಸತಿ ಪದ್ಧತಿಗೆ ವೈಜ್ಞಾನಿಕವಾಗಿ ಉತ್ತರ ಕೊಡಲು ಆಗದ ಕಾರಣ ಅದು ಅನಿಷ್ಟ ಪದ್ಧತಿಯಾಗಿ ಇತಿಹಾಸ ಸೇರಿತು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ಉತ್ತರ ನೀಡುವಂತಾಗಬೇಕು. ಬಿಂಬಗಳು ದೇವರಲ್ಲ, ದೇವಸ್ಥಾನದಲ್ಲಿ ಬಿಂಬ ಇಡುವುದು ನಮ್ಮ ಅನುಕೂಲಕ್ಕೆ ಹೊರತು ದೇವಸ್ಥಾನದ ಅನುಕೂಲಕ್ಕಲ್ಲ. ದೇವಸ್ಥಾನಗಳಲ್ಲಿ ಸಂಪತ್ತು ಕೂಡಿಟ್ಟು ನಿಷ್ಕ್ರಿಯಗೊಳಿಸುವ ಬದಲು ಸಕ್ರಿಯಗೊಳಿಸುವ ಕಾರ್ಯ ಆಗಬೇಕು. | ಡಾ.ಅರುಣ್ ಉಳ್ಳಾಲ, ಪ್ರಧಾನ ಸಂಚಾಲಕ, ಅಂಬಾವನ