ಜಿಲ್ಲೆ

ಡ್ರಗ್ಸ್ ಪೆಡ್ಲರ್​ಗಳಿಗೆ ಇ.ಡಿ. ಹುಡುಕಾಟ

manjunatha

* 37 ಪೆಡ್ಲರ್​ಗಳ ಪಟ್ಟಿ ರೆಡಿ, ದಾಳಿ ನಡೆಸಲು ಸಜ್ಜು * ವಿದೇಶಿಗರೇ ಜಾಸ್ತಿ, ಆನ್​ಲೈನ್​ನಲ್ಲೇ ವ್ಯವಹಾರ

ಅವಿನಾಶ ಮೂಡಂಬಿಕಾನ ಬೆಂಗಳೂರು: ರಾಜ್ಯದಲ್ಲಿರುವ 37ಕ್ಕೂ ಅಧಿಕ ಡ್ರಗ್ಸ್ ಪೆಡ್ಲರ್​ಗಳ ಪಟ್ಟಿ ಸಿದ್ಧಪಡಿಸಿರುವ ‘ಜಾರಿ ನಿರ್ದೇಶನಾಲಯ’ (ಇಡಿ), ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿರುವ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ಮತ್ತಷ್ಟು ರಹಸ್ಯ ಭೇದಿಸಲು ಮುಂದಾಗಿದೆ.

ಅಕ್ರಮ ಹಣ ವರ್ಗಾವಣೆ ಮಾಡಿರುವ ಡ್ರಗ್ಸ್ ಪೆಡ್ಲರ್​ಗಳ ಮೇಲೆ ಕಣ್ಣಿಟ್ಟಿದ್ದೇವೆ. ಡ್ರಗ್ಸ್ ಮಾಫಿಯಾದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಪೆಡ್ಲರ್​ಗಳು ಪ್ರಮುಖ ಪಾತ್ರ ವಹಿಸಿರುವುದು ಕಂಡು ಬಂದಿದೆ. | ಇ.ಡಿ. ಅಧಿಕಾರಿ

ಡ್ರಗ್ಸ್ ದಂಧೆಯಲ್ಲಿ ವಿದೇಶಗಳಿಗೆ ಕೋಟ್ಯಂತರ ರೂ. ಹಣ ವರ್ಗಾಯಿಸಿರುವ ಪೆಡ್ಲರ್​ಗಳು ದೊಡ್ಡ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಸುಳಿವು ಸಿಕ್ಕಿದೆ. ಸದ್ಯದಲ್ಲೇ 37ಕ್ಕೂ ಅಧಿಕ ಪೆಡ್ಲರ್​ಗಳ ಮೇಲೆ ದಾಳಿ ನಡೆಸಿ ಅವರು ಹೊಂದಿರುವ ಭಾರಿ ಪ್ರಮಾಣದ ಚರಾಸ್ತಿ- ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಲು ಇಡಿ ಸಜ್ಜಾಗಿದೆ. ರಾಜ್ಯದಲ್ಲಿರುವ ಪೆಡ್ಲರ್​ಗಳ ಪೈಕಿ ವಿದೇಶಿಗರ ಸಂಖ್ಯೆಯೇ ಅಧಿಕವಾಗಿದೆ.

ಸ್ಯಾಂಡಲ್​ವುಡ್ ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿದ್ದಾಗ ಪೆಡ್ಲರ್​ಗಳ ಅಸಲಿ ಬಣ್ಣ ಇಡಿ ಗಮನಕ್ಕೆ ಬಂದಿದೆ. ಡ್ರಗ್ಸ್ ಜಾಲದಲ್ಲಿ ತೊಡಗಿ ಸಾವಿರಾರು ಕೋಟಿ ರೂ. ವಹಿವಾಟು ನಡೆಸಿರುವ ಸೂತ್ರದಾರರು ಮಾತ್ರ ತಮ್ಮ ಹೆಸರು ಎಲ್ಲೂ ತುಳುಕಿ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ. ಕರ್ನಾಟಕದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಹೊರ ರಾಜ್ಯದ ಪ್ರಮುಖ ಪೆಡ್ಲರ್​ಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರಿಗಾಗಿ ‘ಇಡಿ’ ಹುಡುಕಾಟ ನಡೆಸುತ್ತಿದೆ.

ಆನ್​ಲೈನ್​ನಲ್ಲಿ ವ್ಯವಹಾರ

ಬಾಲಿವುಡ್, ಸ್ಯಾಂಡಲ್​ವುಡ್ ನಟ- ನಟಿಯರು ಹಾಗೂ ಅವರ ಆಪ್ತರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್​ಗಳು ಕುಬೇರರಾಗಿದ್ದಾರೆ. ಎಂಡಿಎಂಎ, ಹ್ಯಾಶಿಶ್, ಎಲ್​ಎಸ್​ಡಿ, ಅಫೀಮ್ ಬ್ರೌನ್ ಶುಗರ್ ಅನ್ನು ವಿದೇಶಗಳಿಂದ ಹಡಗು, ಪೋಸ್ಟ್, ವಾಯುಮಾರ್ಗದಲ್ಲಿ ತರಿಸಿಕೊಂಡು ಸ್ಥಳೀಯರಿಗೆ ಆನ್​ಲೈನ್ ಮೂಲಕ ಮಾರಾಟ ಮಾಡುತ್ತಿದ್ದರು. ಸ್ಥಳೀಯ ಪೆಡ್ಲರ್​ಗಳು ಈ ಡ್ರಗ್ಸ್ ಅನ್ನು ಪಾರ್ಟಿಗಳು, ಪಬ್​ಗಳು, ನಿರ್ಜನ ಪ್ರದೇಶಗಳಲ್ಲಿ ಗ್ರಾಹಕರಿಗೆ ಪೂರೈಸುತ್ತಿದ್ದರು. ಆನ್​ಲೈನ್​ನಲ್ಲೇ ಎಲ್ಲ ವಹಿವಾಟು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಪೆಡ್ಲರ್​ಗಳ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ. ಅವರನ್ನು ಪತ್ತೆ ಹಚ್ಚಿದರಷ್ಟೆ ಡ್ರಗ್ಸ್ ಸರಬರಾಜಿನ ಮೂಲ ಮಾಹಿತಿ ಸಿಗಲಿವೆ ಎಂದು ಇಡಿ ಮೂಲಗಳು ತಿಳಿಸಿವೆ.

ವಿದೇಶಿ ಪೆಡ್ಲರ್​ಗಳ ಹಾವಳಿ

ಬೆಂಗಳೂರು, ಚೆನ್ನೈ, ಆಂಧ್ರ ಪ್ರದೇಶ ಸೇರಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ವಿದೇಶಿ ಪೆಡ್ಲರ್​ಗಳು ನೆಲೆಯೂರಿದ್ದಾರೆ. ಪ್ರವಾಸಿ ವೀಸಾದಡಿ ನಗರಗಳಿಗೆ ಬಂದು ಸದ್ದಿಲ್ಲದೇ ಡ್ರಗ್ಸ್ ದಂಧೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಸಿರುವುದು ಇಡಿ ಗಮನಕ್ಕೆ ಬಂದಿದೆ.

ಪೆಡ್ಲರ್​ಗೆ 50 ಲಕ್ಷ ರೂ.!

ಎನ್​ಸಿಬಿಯಿಂದ ಬಂಧನಕ್ಕೊಳಗಾದ ಮೊಹಮದ್ ಅನೂಪ್​ಗೆ ಕೇರಳ ಚಿನ್ನ ಸ್ಮಗ್ಲಿಂಗ್ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು 50 ಲಕ್ಷ ರೂ. ನೀಡಿದ್ದ. ಅನೂಪ್ 2013ರಿಂದ ಡ್ರಗ್ಸ್ ಪೆಡ್ಲಿಂಗ್​ನಲ್ಲಿದ್ದು, ಆನ್​ಲೈನ್ ಮೂಲಕ ಹೊರ ರಾಜ್ಯದ ಪೆಡ್ಲರ್​ಗಳಿಂದ ಭಾರಿ ಪ್ರಮಾಣದ ಡ್ರಗ್ಸ್ ತರಿಸಿ ಸ್ಥಳೀಯರಿಗೆ ನೀಡುತ್ತಿದ್ದ. ವಾರ್ಷಿಕವಾಗಿ 3-4 ಲಕ್ಷ ರೂ. ಸಂಪಾದಿಸುತ್ತಿದ್ದ. ದೊಡ್ಡ ಡ್ರಗ್ ಪೆಡ್ಲರ್​ಗಳ ಬಗ್ಗೆ ಈತನಿಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಇಡಿ ತಿಳಿಸಿದೆ.