ಜಿಲ್ಲೆ

ತದಡಿಯಲ್ಲಿ 300 ಕೋಟಿ ವೆಚ್ಚದಲ್ಲಿ ಇಕೋ ಟೂರಿಸಂ ಹಬ್‌

ಕಾರವಾರ: ತದಡಿಯನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಯೇ ಉಳಿಸಿಕೊಂಡು,ಅಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ.

ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್‌ಐಐಡಿಸಿ) ಈ ಸಂಬಂಧ 300 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಸಿದ್ಧ ಮಾಡಿದೆ.

ಬುಧವಾರ ಬೆಂಗಳೂರಿನಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ, ಕೆಎಸ್‌ಐಐಡಿಸಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಈ ಸಂಬಂಧ ಕೆಎಸ್‌ಐಐಡಿಸಿ ಅಧಿಕಾರಿಗಳ ಸಭೆ ನಡೆಸಿದರು.

ತದಡಿಯಲ್ಲಿ ಹಿಂದೆ ಕೈಗಾರಿಕೆ ನಿರ್ಮಾಣಕ್ಕಾಗಿ 1800 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಮಾಡಲಾಗಿತ್ತು. ಅದು, ಕಾಂಡ್ಲಾ ಸಸ್ಯಗಳಿರುವ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪ್ರದೇಶವಾಗಿದೆ.

ಅಲ್ಲಿ ಈ ಹಿಂದೆ ವಾಣಿಜ್ಯ ಬಂದರು, ಶಾಖೋತ್ಪನ್ನ ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ನಡೆದ ಪ್ರಯತ್ನಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಈಗ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ. "ಪರಿಸರ ಸೂಕ್ಷ್ಮ ವಲಯವನ್ನು ಉಳಿಸಿಕೊಂಡು, ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ತದಡಿಯನ್ನು ಅಭಿವೃದ್ಧಿ ಮಾಡಲು ಯೋಜನೆ ಸಿದ್ಧ ಮಾಡಲಾಗಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಉದ್ದೇಶಿತ ಸ್ಥಳದಲ್ಲಿ ಹೈಟೆಕ್ ರೆಸಾರ್ಟ್, 184 ಟ್ರೀ  ಹಟ್ ಗಳು, 70 ಹೋಟೆಲ್ ಕೊಠಡಿಗಳು, ಪರಿಸರಸ್ನೇಹಿ ವಾಯುವಿಹಾರ ಪಥ, ಯೋಗ ತಾಣ, ಪೆಡ್ಲಿಂಗ್ ಬೋಟ್, ತೂಗುಸೇತುವೆಗಳು, ಸ್ಕೈವಾಕ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು.  ಸಮಗ್ರ ಅಭಿವೃದ್ಧಿಗಾಗಿ 'ತದಡಿ ಇಕೋ ಟೂರಿಸಂ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್' ಎನ್ನುವ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಎಂದು ಅವರು ಟ್ವೀಟ್‌ ಮಾಡಿದ್ದಾರೆ.