ಜಿಲ್ಲೆ

ಬೆಳಪು ಸಂಶೋಧನಾ ಕೇಂದ್ರಕ್ಕೆ ಗ್ರಹಣ

ಇಂದಿರಾ ಎನ್ ಕೆ

ಹೇಮನಾಥ್ ಪಡುಬಿದ್ರಿ ಉನ್ನತ ಶಿಕ್ಷಣದ ಕನಸು ಹೊತ್ತ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಬೇಕಿದ್ದ ಕಾಪು ತಾಲೂಕಿನ ಬೆಳಪುವಿನಲ್ಲಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಅವ್ಯವಹಾರ ನಡೆದಿರುವ ಸಂಶಯ ಮೂಡಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ 2013ರಲ್ಲಿ ಮಂಜೂರಾತಿ ನೀಡಲಾಗಿದ್ದು, 2015ರಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಬೆಳಪುಗೆ ಆಗಮಿಸಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. 2017ರಲ್ಲಿ 53.85 ಕೋಟಿ ರೂ. ವೆಚ್ಚದ ಪ್ರಥಮ ಹಂತದ ಕಾಮಗಾರಿಗೆ ಮಂಗಳೂರು ವಿವಿ ಕಟ್ಟಡ ಸಮಿತಿ ಸಮ್ಮತಿಸಿದ್ದು, ಬಳಿಕ 44.92 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಅಂದಿನ ಕುಲಪತಿ 2023ರಲ್ಲಿ ಕೇಂದ್ರ ಕಾರ್ಯಾರಂಭಿಸಲಿದೆ ಎಂದು ತಿಳಿಸಿದ್ದು, ಕಾಮಗಾರಿ ಆರಂಭಗೊಂಡು ಒಂಬತ್ತು ವರ್ಷಗಳೇ ಉರುಳಿದರೂ ಪೂರ್ತಿಗೊಂಡಿಲ್ಲ. 141ಕೋಟಿ ರೂ. ವೆಚ್ಚದ ಯೋಜನೆ: ವಿಜ್ಞಾನ ಸಂಶೋಧನಾ ಕೇಂದ್ರಕ್ಕಾಗಿ ಜಿಲ್ಲಾಡಳಿತದಿಂದ ಮಂಜೂರಾದ 24.26 ಎಕ್ರೆ ಸರ್ಕಾರಿ ಭೂಮಿಯನ್ನು ಕೆಎಐಡಿಬಿ ಮೂಲಕ ಮಂಗಳೂರು ವಿಶ್ವವಿದ್ಯಾಲಯ ಸುಪರ್ದಿಗೆ ನೀಡಲಾಗಿತ್ತು. ಮಂಗಳೂರು ವಿವಿ ಮತ್ತು ಕರ್ನಾಟಕ ಗೃಹ ಮಂಡಳಿ ನಡುವಿನ ಒಡಂಬಡಿಕೆಯಂತೆ ಕಟ್ಟಡ ಮತ್ತು ಭೌತಿಕ ಮೂಲಸೌಕರ್ಯಗಳಿಗೆ 74.50 ಕೋಟಿ ರೂ., ಸಂಶೋಧನಾ ಉಪಕರಣಗಳಿಗೆ 51 ಕೋಟಿ ರೂ., ಆವರ್ತಕವಲ್ಲದ 126 ಕೋಟಿ ರೂ. ವೆಚ್ಚದ ಕಾಮಗಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ವಾರ್ಷಿಕ ಆವರ್ತಕ 15.58 ಕೋಟಿ ರೂ. ಸೇರಿ 141.08 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯ ನೀಲಿ ನಕಾಶೆ ಸಿದ್ಧಗೊಂಡು ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಗೆ ಗುತ್ತಿಗೆ ವಹಿಸಿಲಾಗಿತ್ತು. ರೂಸಾ ನಿಧಿ ಬಳಕೆಗೆ ಸಮ್ಮತಿ: 2014-15ರ ಬಜೆಟ್ ಘೋಷಣೆಯಂತೆ ವಿಜ್ಞಾ ತಂತ್ರಜ್ಞಾನ ಇಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ ಹೊಸ ವಿಚಾರ ಉಚ್ಚತರ ಶಿಕ್ಷಣ ಅಭಿಯಾನ (ರೂಸಾ) ಯೋಜನೆ ನಿಧಿಯಿಂದ ಮಂಗಳೂರು ವಿವಿ ಮೂಲಕ 15 ಕೋಟಿ ರೂ., 2015-16ರಲ್ಲಿ 15 ಕೋಟಿ ರೂ. ಬಳಸಿಕೊಳ್ಳಲು ಸಮ್ಮತಿಸಲಾಗಿತ್ತು. 2017-18ನೇ ಆರ್ಥಿಕ ವರ್ಷಕ್ಕೆ 16.67 ಕೋ. ರೂ. ಹಂಚಿಕೆ ಮಾಡಲಾಗಿದೆ. ಬಾಕಿಯುಳಿದ 33.33 ಕೋಟಿ ರೂ. ಹಣವನ್ನು ಎರಡು ವರ್ಷಗಳಲ್ಲಿ ಬಿಡುಗಡೆಗೊಳಿಸಿ ಉದ್ದೇಶಿತ ಕಾಮಗಾರಿಗೆ ಬಳಸುವಂತೆ ಷರತ್ತು ವಿಧಿಸಿ ಕಾಮಗಾರಿ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಅನುದಾನ ದುರುಪಯೋಗ ?: ಮಂಜೂರಾದ 38.30 ಕೋಟಿ ರೂ. ಅನುದಾನದಲ್ಲಿ 30.50 ಕೋಟಿ ರೂ. ಹಣವನ್ನು ಮಂಗಳೂರು ವಿವಿ ಕಾಮಗಾರಿಯ ನಿರ್ವಹಣೆ ವಹಿಸಿಕೊಂಡಿರುವ ಕರ್ನಾಟಕ ಗೃಹ ಮಂಡಳಿಗೆ ನೀಡಿದ್ದು, ಬಳಿಕ ಈ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಉಳಿದ 8 ಕೋಟಿ ರೂ.ವನ್ನು ಮಂಗಳೂರು ವಿವಿ ಇತರ ಯೋಜನೆಗಳಿಗೆ ಬಳಸಿಕೊಂಡ ಬಗ್ಗೆ ಆರೋಪಗಳು ಕೇಳಿಬಂದಿವೆ. ಜತೆಗೆ ಭಾರಿ ಅವ್ಯವಹಾರಗಳಾಗಿರುವ ಶಂಕೆಯೂ ವ್ಯಕ್ತವಾಗಿದೆ. ಹಲವು ವರ್ಷಗಳಾದರೂ ಕಾಮಗಾರಿ ಬೆಳಪು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ದಶಕದ ಕನಸಿಗೆ ನೀರು ಎರೆಚಿದಂತಾಗಿದೆ.

ಪೂರ್ತಿಯಾದ ಕಾಮಗಾರಿಗಳು

ಶೇ.80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಕಟ್ಟಡಗಳಿಗೆ ಒಳಗಿನ ಕಿಟಿಕಿ ಬಾಗಿಲುಗಳ ಜೋಡಣೆ, ಬಾಗಿಲುಗಳ ಜೋಡಣೆ ಕೆಲಸ ಪ್ರಗತಿಯಲ್ಲಿದೆ. ಆರ್‌ಸಿಸಿ ಡ್ರೈನ್ ಕೆಲಸ ಶೇ.70ರಷ್ಟು ಪೂರ್ಣಗೊಂಡಿದೆ. ಎಂಟು ಬ್ಲಾಕ್‌ಗಳ ವಿದ್ಯುತ್ ಸಂಪರ್ಕ, ಪ್ಲಂಬಿಗ್, ಪೈಂಟಿಂಗ್, ಎಸ್‌ಟಿಪಿ ಪ್ಲಾಂಟ್, ಕಾಂಪೌಂಡ್ ಹಾಲ್ ನಿರ್ಮಾಣ ಸಹಿತ ಕೆಲವು ಕೆಲಸಗಳಷ್ಟೇ ಬಾಕಿಯುಳಿದಿವೆ.

ಬೆಳಪು ಗ್ರಾಮದಲ್ಲಿನ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು, ಅನುದಾನದಲ್ಲಿ ಅವ್ಯವಹಾರವಾಗಿರುವ ಬಗ್ಗೆ ಸಂಶಯ ಮೂಡಿದೆ. ತನಿಖೆ ನಡೆಸಲು ಐವರು ಸಿಂಡಿಕೇಟ್ ಸದಸ್ಯರ ಸಮಿತಿ ರಚಿಸಿರುವುದು ಸ್ವಾಗತಾರ್ಹ. -ದೇವಿಪ್ರಸಾದ್ ಶೆಟ್ಟಿ, ಬೆಳಪು ಗ್ರಾ.ಪಂ ಅಧ್ಯಕ್ಷ