ಜಿಲ್ಲೆ

ಚುನಾವಣಾ ಅಕ್ರಮದ ಬಗ್ಗೆ ದೂರು ದಾಖಲಿಸಲು ಸಹಾಯವಾಣಿ ಆರಂಭ; ಇಲ್ಲಿದೆ ಸಂಪೂರ್ಣ ಮಾಹಿತಿ

Webdesk - Manjunatha B

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನಲೆಯಲ್ಲಿ ನಗರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ಸಂಬಂಧ ದೂರು ದಾಖಲಿಸಲು ಪಾಲಿಕೆ ವತಿಯಿಂದ ಪ್ರತ್ಯೇಕ ಸಹಾಯವಾಣಿ ತೆರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸೇರಿ ಇತರ ಬಗ್ಗೆ ಸಾರ್ವಜನಿಕರು ಉಚಿತವಾಗಿ 1950ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಬೆಂಗಳೂರು ನಗರ, ಕೇಂದ್ರ, ಉತ್ತರ ಮತ್ತು ದಕ್ಷಿಣ ಚುನಾವಣಾ ಜಿಲ್ಲೆಗಳ ಸಂಬಂಧ ಚುನಾವಣಾ ನೀತಿ ಸಂಹಿತೆ ಬಗ್ಗೆ ದೂರು ದಾಖಲಿಸಲು ಜಿಲ್ಲಾ ದೂರು ಮಾನಿಟರಿಂಗ್ ಸೆಲ್ ತೆರೆಯಲಾಗಿದೆ. ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಅನೆಕ್ಸ್3 ಕಟ್ಟಡದ 6ನೇ ಮಹಡಿಯಲ್ಲಿ 24*7 ಗಂಟೆ ಕಾಲ ಜಿಲ್ಲಾ ದೂರು ಮಾನಿಟರಿಂಗ್ ಸೆಲ್ ಕಾರ್ಯನಿರ್ವಹಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜಧಾನಿಯಲ್ಲಿ ಚುನಾವಣೆ ಸಂಬಂಧ ಕಾರ್ಯಕ್ರಮ ಆಯೋಜಿಸುವುದು, ಇತರೆ ಚುನಾವಣಾ ಅಪರಾಧಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ದಾಖಲಿಸಬಹುದು. ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ಹಾಗೂ ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸೇರಿ ಇತರೆ ಬಗ್ಗೆ ಚುನಾವಣಾ ದೂರು ಸ್ವೀಕರಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಮೂಕ್ಯ ಆಯುಕ್ತ ತುಷಾರ್​ ಗಿರಿನಾಥ್​ ತಿಳಿಸಿದ್ದಾರೆ.