ಬೈಂದೂರು: ನಮ್ಮ ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತಲ ಬೆಳೆಯುವ ಸೊಪ್ಪು ತರಕಾರಿಗಳು ಪೋಷಕಾಂಶಗಳ ಆಗರವಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನ ಉಪಯೋಗಿಸುವುದರಿಂದ ನಮಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದು. ಇದು ಕೇವಲ ಮಕ್ಕಳು, ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಇಂದಿನ ಅಗತ್ಯವಾಗಿದೆ ಎಂದು ಉಪ್ಪುಂದ ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಹೇಳಿದರು.
ಉಪ್ಪುಂದ ಗ್ರಾಪಂ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಪಂ ವ್ಯಾಪ್ತಿಯ ಒಂಬತ್ತು ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಇಲ್ಲಿನ ರೈತಸಿರಿ ಸಭಾಭವನದಲ್ಲಿ ಪೋಷಣ್ ಅಭಿಯಾನ, ಸೀಮಂತ ಹಾಗೂ ಅನ್ನಪ್ರಾಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮನೆಯಿಂದ ತಯಾರಿಸಿ ತಂದಿದ್ದ ಪೌಷ್ಟಿಕಾಂಶ ತಿಂಡಿಗಳನ್ನು ಪ್ರದರ್ಶಿಸಿದರು. ಆಯ್ಕೆಯಾದ ತಿನಿಸುಗಳಿಗೆ ಬಹುಮಾನ ನೀಡಲಾಯಿತು. ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರಾದ ಮಂಜುನಾಥ ದೇವಾಡಿಗ, ಸುಶೀಲಾ ಖಾರ್ವಿ, ಪಿಡಿಒ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರೇವತಿ, ಆರೋಗ್ಯ ಇಲಾಖೆ ಬೈಂದೂರು ಸಿಎಚ್‌ಒ ಸಹನಾ, ಬಾಲವಿಕಾಸ ಸಮಿತಿ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು, ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಸಿಂಚನಾ ಸ್ವಾಗತಿಸಿದರು. ಉಷಾ ನಿರೂಪಿಸಿದರು. ಸಾವಿತ್ರಿ ವಂದಿಸಿದರು.