ಹುಬ್ಬಳ್ಳಿ: ಮನೆ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ (Police) ಬೇಕಾಗಿದ್ದ ಕುಖ್ಯಾತ ರೌಡಿಶೀಟರ್ ಪಾಲಾ ವೆಂಕಟೇಶ್ವರರಾವ್ನ ಎರಡು ಕಾಲಿಗೆ ಗುಂಡು ಹಾರಿಸಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಒಂದರ ಸಂಬಂಧ ಪಾಲಾ ವೆಂಕಟೇಶ್ವರ್ ರಾವ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಆತ ಅಧಿಕಾರಿಗಳ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಅಧಿಕಾರಿಗಳು ರಕ್ಷಣೆಗಾಗಿ ಆರೋಪಿಯ ಎರಡು ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ಸೇರಿದಂತೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್, ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನವಲೂರಿನಲ್ಲಿ ವಿಕಾಸ್ ಕುಮಾರ್ ಎಂಬುವವರ ಮನೆಗೆ ಕನ್ನ ಹಾಕಲು ಪಾಲಾ ವೆಂಕಟೇಶ್ವರ್ ಹಾಗೂ ಸಹಚರರು ಹೊಂಚು ಹಾಕಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ವೆಂಕಟೇಶ್ವರ್ನನ್ನು ಬಂಧಿಸಿದ್ದರು.
ಆರೋಪಿ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪಿಎಸ್ಐ ಪ್ರಮೋದ್ ಎರಡು ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಕೂಡಲೇ ಆತ ಕುಸಿದು ಬಿದ್ದಿದ್ದು, ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್ಐ ಪ್ರಮೋದ್ ಸೇರಿದಂತೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಆಂಧ್ರಪ್ರದೇಶದವನಾದ ಪಾಲಾ ವೆಂಕಟೇಶ್ವರ್ರಾವ್ ಈ ವರ್ಷ ಜೂನ್ 06ರಂದು ಅಶೋಕ್ ಕದಂ ಎಂಬುವವರು ಮನೆಗೆ ನುಗ್ಗಿ ದರೋಡೆ ಮಾಡಿ ಬಳಿಕ ದಂಪತಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆರೋಪಿಗಳ ಹೀನ ಕೃತ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ಬೇಕಾಗಿರುವ ಪಾಲಾ ವೆಂಕಟೇಶ್ವರ್ರಾವ್ ಹಾಗೂ ಕುಟುಂಬಸ್ಥರು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ಸದ್ಯ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.