ಗಂಗೊಳ್ಳಿ: ಗಂಗೊಳ್ಳಿ ಬಹಳ ಸೂಕ್ಷ್ಮಪ್ರದೇಶ. ಯಾವುದೇ ವಿಚಾರಧಾರೆ ಮಾಡಬೇಕಿದ್ದರೆ ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಮಾಡಬೇಕಾದುದು ಜನಪ್ರತಿನಿಧಿಗಳ ಕರ್ತವ್ಯ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಅಧಿಕಾರಿ ಸ್ವೀಕರಿಸುವಾಗ ಅವರ ಕಚೇರಿಯಲ್ಲಿ ಪೂಜೆ ಮಾಡಿ ಅಧಿಕಾರ ಸ್ವೀಕಾರ ಮಾಡುವುದು ನಡೆದುಕೊಂಡು ಬಂದ ಪದ್ಧತಿ. ಅದರಂತೆ ಗಂಗೊಳ್ಳಿ ಗ್ರಾಪಂ ಅಧ್ಯಕ್ಷರು ಕಚೇರಿಯಲ್ಲಿ ಪೂಜೆ ಮಾಡಿದ್ದಾರೆ. ಅವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಲು ಶಾಸಕರಿಗೆ ಯಾವುದೇ ಹಕ್ಕಿಲ್ಲ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಶಾಸಕರ ಹಿಂದು ವಿರೋಧಿ ನೀತಿ ಖಂಡಿಸಿ ಗಂಗೊಳ್ಳಿ ಗ್ರಾಪಂ ಕಚೇರಿ ಮುಂಭಾಗ ಶನಿವಾರ ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗಂಗೊಳ್ಳಿಯಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುವುದೇ ನಮ್ಮ ಉದ್ದೇಶ. ಇಲ್ಲಿ ಜಾತಿ ರಾಜಕಾರಣ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸಿ, ಅಭಿವೃದ್ಧಿಯೇ ನಮ್ಮ ಗುರಿ. ಜನರ ಬೇಡಿಕೆಯನ್ನು ಸರ್ಕಾರದ ಮೂಲಕ ಮಾಡಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಮುಖಂಡರಾದ ಅನಂತ ಮೊವಾಡಿ, ಹರೀಶ ಕೊಡಪಾಡಿ, ಶೇಖರ ದೇವಾಡಿಗ, ರಾಜು ಪೂಜಾರಿ, ಉದಯ ಖಾರ್ವಿ ಕಂಚುಗೋಡು, ಗ್ರಾಪಂ ಮಾಜಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.