ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಶ್ರೀ ಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್. ಯೋಗ ಸಮಿತಿಯಿಂದ ನವರಾತ್ರಿ ಪ್ರಯುಕ್ತ ಭಾನುವಾರ ಸಾಮೂಹಿಕ ಯೋಗದುರ್ಗಾ ನಮಸ್ಕಾರ, ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕೇಸ್ತರ ಮನೋಹರ ಶೆಟ್ಟಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸುನೀಲ್ ಆಳ್ವ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ದೇವಾಲಯದ ಅರ್ಚಕ ಪ್ರಸಾದ್ ಭಟ್ ಬಪ್ಪನಾಡು, ಎಸ್.ಪಿ.ವೈ.ಎಸ್.ಎಸ್. ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ, ಸಹ ಸಂಚಾಲಕ ಯೋಗಿಶ್ ಆಚಾರ್ಯ, ನೇತ್ರಾವತಿ ವಲಯ ಚಿಂತನಾಕೂಟ ಪ್ರಮುಖರಾದ ಪ್ರತಾಪ್ ಕೆ.ಎಸ್., ಸುರತ್ಕಲ್ ನಗರ ಸಂಚಾಲಕಿ ಶ್ಯಾಮಲಾ ಸುರತ್ಕಲ್, ಕಾರ್ಯಕ್ರಮದ ಸಂಚಾಲಕ ಜೀತೇಂದ್ರ ಕಾಟಿಪಳ್ಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಂಜಾನೆ 4.30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 9 ಸುತ್ತು ಯೋಗ ದುರ್ಗಾ ನಮಸ್ಕಾರ, ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆಯೊಂದಿಗೆ ಬೆಳಗ್ಗೆ 7.30ಕ್ಕೆ ಸವಾಪನಗೊಂಡಿತು. ಯೋಗ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣದ ಮಹತ್ವವನ್ನು ಪುತ್ತೂರು ಶಾಖೆಯ ಯೋಗ ಶಿಕ್ಷಕ ಲಕ್ಷ್ಮೀಕಾಂತ ತಿಳಿಸಿದರು. ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಂದ 21 ಬಸ್, 5 ಮಿನಿ ಬಸ್, 151 ಕಾರು ಜೀಪುಗಳು, 67 ದ್ವಿಚಕ್ರ ವಾಹನಗಳಲ್ಲಿ 3,000ಕ್ಕೂ ಹೆಚ್ಚಿನ ಯೋಗಪಟುಗಳು ಆಗಮಿಸಿದ್ದರು.
ದೇವಸ್ಥಾನದ ಹೊರಾಂಗಣ, ರಾಜಗೋಪುರದ ಮುಂಭಾಗದಿಂದ ಬಾಕಿವಾರು ಕಟ್ಟೆಯ ತನಕದ ವಿಶಾಲವಾದ ಜಾಗದಲ್ಲಿ ನೇರ ಸಾಲುಗಳಲ್ಲಿ ಭರ್ತಿಯಾಗಿ ಯೋಗ ನಮಸ್ಕಾರ ವಾಡಿದರು. ಯೋಗ ಶಿಕ್ಷಕ ಸೂರಜ್ ಕಂಕನಾಡಿ ವಾರ್ಗದರ್ಶನದಲ್ಲಿ ಯೋಗ ನಮಸ್ಕಾರ ನಡೆಯಿತು. ಜಿಲ್ಲಾ ಸಹ ಸಂಚಾಲಕ ಗಣೇಶ್ ಕೋಡಿಕಲ್ ಶವಾಸನ ವಾಡಿಸಿದರು. ರಶ್ಮಿ ಸುರತ್ಕಲ್ ನಿರೂಪಿಸಿದರು. ಸಂಧ್ಯಾ ಕೃಷ್ಣಾಪುರ ವಂದಿಸಿದರು.