ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಚರಿ ಸಲು ಅನುಕೂಲವಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಪಾಸ್ಗಳನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅಸಲಿ ಪಾಸ್ ಅನ್ನು ಕಲರ್ ಜೆರಾಕ್ಸ್ ಮಾಡಿಸಿಕೊಂಡು ಓಡಾಡುತ್ತಿದ್ದ ಆರು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆ.ಜಿ. ಹಳ್ಳಿಯ ಗಾಂಧಿನಗರ ನಿವಾಸಿಗಳಾದ ನದೀಂ ಪಾಷಾ (36), ಮೊಹ್ಮದ್ ಅಬ್ದುಲ್ ರೆಹಮಾನ್ (25), ಮೊಹ್ಮದ್ ಜುನೈದ್ ಖುರೇಶಿ (21), ಮೊಹ್ಮದ್ ರಕೀಬ್ (20), ಜಬೀಉಲ್ಲಾ (30) ಮತ್ತು ಇರ್ಷಾದ್ ಪಾಷಾ (40) ಬಂಧಿತರು. ಆರೋಪಿಗಳಿಂದ 1 ವ್ಯಾನ್ ಮತ್ತು 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಆರೋಪಿಗಳು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹೊರಗಡೆ ಓಡಾಡಲು ವೆಹಿಕಲ್ ಪಾಸ್ ಸಿಕ್ಕಿರಲಿಲ್ಲ. ಹೀಗಾಗಿ, ನದೀಂ ಪಾಷಾ ಪೊಲೀಸ್ ಇಲಾಖೆಯ ‘ಕೋವಿಡ್-19 ವೆಹಿಕಲ್ ಪಾಸ್’ ಪಾಸ್ ಅನ್ನು ಕಲರ್ ಜೆರಾಕ್ಸ್ ಮಾಡಿ ತನ್ನ ಸ್ನೇಹಿತರಿಗೆ ತಲಾ 500 ರೂ.ಗಳಿಗೆ ಮಾರಾಟ ಮಾಡಿದ್ದ ಎಂದು ಹೇಳಿದ್ದಾರೆ.
ಏ.9ರಂದು ಎಎಸ್ಐ ದಿನೇಶ್ ಶೆಟ್ಟಿ ಹಾಗೂ ಪೇದೆ ಸುರೇಶ್ ಬ್ಯಾಡಗಿ ನಾಗವಾರದ ನಾಗಲಿಂಗೇಶ್ವರ ದೇವಸ್ಥಾನದ ಬಳಿ ಚೆಕ್ಪೋಸ್ಟ್ನಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಧ್ಯಾಹ್ನ 1 ಗಂಟೆಯಲ್ಲಿ ಒಮಿನಿ ವ್ಯಾನ್ ಬಂದಿತ್ತು. ಪೊಲೀಸರು ಪಾಸ್ ಕೇಳಿದಾಗ ಚಾಲಕ ಪಾಸ್ ತೋರಿಸಿದ್ದ. ಅದನ್ನು ಪರಿಶೀಲಿಸಿದಾಗ, ಈಶಾನ್ಯ ವಿಭಾಗದ ಡಿಸಿಪಿ ಸಹಿ ಮತ್ತು ಕಚೇರಿಯ ಮೊಹರಿನ ಪಾಸ್ ಅನ್ನು
ಕಲರ್ ಜೆರಾಕ್ಸ್ ಮಾಡಿಕೊಂಡಿರುವುದು ಗೊತ್ತಾಗಿದೆ. ಅಸಲಿ ಪಾಸ್ ತೋರಿಸುವಂತೆ ವಿಚಾರಿಸಿದಾಗ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಇದೇ ವೇಳೆ ಬೈಕ್ನಲ್ಲಿ ನದೀಂ ಪಾಷಾ ಬಂದಿದ್ದು, ಆತನೇ 500 ರೂ. ಪಡೆದು ಪಾಸ್ ಕೊಟ್ಟಿದ್ದಾನೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಆರು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಶರಣಪ್ಪ ಮಾಹಿತಿ ನೀಡಿದ್ದಾರೆ.