ಜಿಲ್ಲೆ

ಟೈಟಾಗಿ ಹೋಗಿ ಎಟಿಎಂ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದ!

Webdesk - Ravikanth

ಬೆಂಗಳೂರು: ವ್ಯಕ್ತಿಯೊಬ್ಬ ಮದ್ಯಪಾನ ಮಾಡಿಕೊಂಡು ಅದೇ ಅಮಲಿನಲ್ಲಿ ಎಟಿಎಂ ಕೇಂದ್ರಕ್ಕೆ ಹೋಗಿ ದರೋಡೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪ್ರಕರಣವೊಂದು ವರದಿಯಾಗಿದೆ. ಆರೋಪಿಯನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಚೇರಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಕೊಂಡಯ್ಯ (35) ಎಂಬಾತನೇ ಆರೋಪಿ. ಅತಿಯಾಗಿ ಮದ್ಯಪಾನ ಮಾಡಿದ್ದ ಈತ ನಿನ್ನೆ ತಡರಾತ್ರಿ ಎಂ.ಆರ್.ಎಸ್. ಪಾಳ್ಯದ ಎಚ್​​ಡಿಎಫ್​ಸಿ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ದರೋಡೆ ಮಾಡಲು ಯತ್ನಿಸಿದ್ದಾನೆ.

ಎಟಿಎಂ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಒಡೆದು ಬಳಿಕ ಎಟಿಎಂ ಒಡೆಯಲು ಪ್ರಯತ್ನಿಸಿದ್ದ. ಆಗ ಎಟಿಎಂ ನಿರ್ವಹಣಾ ಕೇಂದ್ರಕ್ಕೆ ಅಲರ್ಟ್ ಸಂದೇಶ ರವಾನೆಯಾಗಿತ್ತು. ತಕ್ಷಣ ಎಟಿಎಂ ನಿರ್ವಹಣಾ ಕೇಂದ್ರದ ಸಿಬ್ಬಂದಿ ಜೆ.ಸಿ.ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.