ಮಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಖ್ಯಾತ ನಿರೂಪಕಿ ಅನುಶ್ರೀ ಶನಿವಾರ ಬೆಳಗ್ಗೆ ಸತತ ನಾಲ್ಕು ತಾಸು ಸಿಸಿಬಿ ವಿಚಾರಣೆ ಎದುರಿಸಿದರು.
ಗುರುವಾರ ರಾತ್ರಿ ಮಂಗಳೂರಿನ ಸಿಸಿಬಿ ಪೊಲೀಸ್ ತಂಡ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪಣಂಬೂರಿನ ಠಾಣೆಗೆ ಅನುಶ್ರೀ ಹಾಜರ್ ಆಗಿದ್ದರು. ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತಂಡ ವಿಚಾರಣೆ ನಡೆಸಿತು. ಮಧ್ಯಾಹ್ನ 1ರ ಸುಮಾರಿಗೆ ಕಚೇರಿಯಿದ ಹೊರ ಬಂದ ಅನುಶ್ರೀ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟಿರುವ ತರುಣ್ ರಾಜ್ ನನಗೆ 12 ವರ್ಷಗಳ ಹಿಂದಿನ ಪರಿಚಯ. ಆತ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾನೆ. ಇನ್ನು ಕಿಶೋರ್ನ ಪರಿಚಯವೂ ನನಗಿದೆ. ಆದ್ರೆ ನಾನು ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ಲ. ಡ್ರಗ್ಸ್ ಕುರಿತಾಗಿ ನನಗೆ ಯಾವುದೇ ಸಂಬಂಧ ಇಲ್ಲ' ಎಂದರು. ಇದನ್ನೂ ಓದಿರಿ ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು
'ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುವೆ. ತನಿಖೆಗೆ ಸಹಕಾರ ನೀಡುತ್ತೇನೆ' ಎಂದ ಅನುಶ್ರೀ, 'ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಇದು ಸಮಾಜದಿಂದ ದೂರವಾಗಬೇಕು. ಈ ನಿಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆ ಸ್ವಾಗತಾರ್ಹ. ಅವರಿಗೆ ನಾವು ಸಹಕಾರ ನೀಡಬೇಕು' ಎಂದರು.
ಬಳಿಕ ಅನುಶ್ರೀಯನ್ನು ಕಮಿಷನರ್ ಕಚೇರಿಗೆ ಸಿಸಿಬಿ ಪೊಲೀಸರು ಕರೆದುಕೊಂಡು ಹೋದರು. ಅಲ್ಲಿ ಮತ್ತೆ ವಿಚಾರಣೆ ಆರಂಭಿಸಿದರು.