ಜಿಲ್ಲೆ

ಡ್ರಗ್ಸ್ ಪ್ರಕರಣ ತನಿಖೆಗೆ ಮೂರು ತಂಡ, ನಶೆಯಲ್ಲಿದ್ದ ಯವತಿಯ ಬಂಧನ

Dakshina Kannada

ಮಂಗಳೂರು: ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಬಂಧನದ ಬಳಿಕ ಕರಾವಳಿಯಲ್ಲೂ ಡ್ರಗ್ಸ್ ವ್ಯಾಪಕ ಸದ್ದು ಮಾಡುತ್ತಿದ್ದು, ಪೊಲೀಸರು ಮೂರು ತಂಡ ರಚಿಸಿ ತನಿಖೆ ಮುಂದುವರಿಸಿದ್ದಾರೆ. ಕಿಶೋರ್ ಜತೆ ಪಾರ್ಟಿ ಮಾಡಿದ್ದ ಆರೋಪದಲ್ಲಿ ಯುವತಿ ಅಸ್ಕಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್‌ನ ಸ್ನೇಹಿತೆ ಮಣಿಪುರದ ಯುವತಿಯನ್ನು ಸೋಮವಾರ ವಶಕ್ಕೆ ಪಡೆದಿದ್ದು, ಆಕೆ ಡ್ರಗ್ಸ್ ಸೇವಿಸಿ ನಶೆಯಲ್ಲಿದ್ದ ಕಾರಣ ವಿಚಾರಣೆ ನಡೆಸಲಾಗಿಲ್ಲ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಡ್ರಗ್ಸ್ ಸೇವನೆಗೆ ಸಂಬಂಧಿಸಿದ ವರದಿ ಪಾಸಿಟಿವ್ ಬಂದಿದೆ. ಆಕೆಯ ಡ್ರಗ್ಸ್ ನಶೆ ಇಳಿದ ಬಳಿಕ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಕರೊನಾ ನೆಗೆಟಿವ್: ಬಂಧಿತ ಕಿಶೋರ್ ಹಾಗೂ ಅಕೀಲ್ ನೌಶೀಲ್ ಅವರನ್ನು ಭಾನುವಾರ ಕರೊನಾ ಪರೀಕ್ಷೆಗೊಳಪಡಿಸಲಾಗಿದ್ದು ನೆಗೆಟಿವ್ ವರದಿ ಬಂದಿದೆ. ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಎಲ್ಲ ವಿಧದ ನಂಟು, ಇತರರ ಭಾಗವಹಿಸುವಿಕೆ ಸೇರಿದಂತೆ ತನಿಖೆ ನಡೆಯುತ್ತಿದೆ. ಮೂರು ತಂಡಗಳ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.