ಪಡುಬಿದ್ರಿ: ಮದ್ಯಪಾನದ ಮತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಅಪಾಯಕಾರಿಯಾಗಿ ಕಾರು ಚಲಾಯಿಸಿ, ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಬಳಿಕ ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಬುಧವಾರ ಪಡುಬಿದ್ರಿ ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ಕೊಚ್ಚಿನ್ ನಿವಾಸಿ ಧೀರಜ್(28), ಗೌತಮ್(30) ಆರೋಪಿಗಳು. ಕೇರಳದಿಂದ ಮೋಜಿಗಾಗಿ ಉಡುಪಿಗೆ ಆಗಮಿಸಿದ ಇವರು ಬಳಿಕ ಮಲ್ಪೆಯಲ್ಲಿ ಸುತ್ತಾಡಿ ಹಿಂದಿರುಗುವ ವೇಳೆ ಪಾಂಗಾಳದಲ್ಲಿ ಅಪಘಾತ ಎಸಗಿ ಪರಾರಿಯಾಗಲು ಯತ್ನಿಸಿದ್ದರು. ಮಾಹಿತಿ ಪಡೆದ ತಕ್ಷಣವೇ ಹೆಜಮಾಡಿ ಟೋಲ್‌ಗೇಟ್ ಬಳಿ ಪೊಲೀಸರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಆರೋಪಿಗಳು ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ಬಳಿಕ ಪಡುಬಿದ್ರಿ ಬೀಡು ಬಳಿ ಹಳೇ ಎಂಬಿಸಿ ರಸ್ತೆಯಲ್ಲಿ ಪರಾರಿಯಾಗಲೆತ್ನಿಸಿದಾಗ ಜಾಹೀರಾತು ಫಲಕದ ಕಂಬಕ್ಕೆ ಡಿಕ್ಕಿಯಾಗಿದ್ದು, ಮುಂಭಾಗ ಜಖಂಗೊಂಡಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.