ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಹೆಚ್ಚುತ್ತಿರುವ ಡೆಡ್ಲಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಗೆ ತುರ್ತಾಗಿ 500 ವಾಹನಗಳ ಅಗತ್ಯವಿದೆ. ಆದರೆ, ಒಂದೆಡೆ ಸರ್ಕಾರಿ ಕಚೇರಿಗಳೆಲ್ಲ ರಜೆ ಇರುವುದರಿಂದ ವಾಹನಗಳು ಸಿಗá-ತ್ತಿಲ್ಲ. ಮತ್ತೊಂದೆಡೆ ವಾಹನಗಳು ಸಿಕ್ಕರೂ ಕರೊನಾ ವೈರಸ್ ಅಂಟಿಕೊಳ್ಳುವ ಭೀತಿಯಿಂದಾಗಿ ಚಾಲಕರು ಮುಂದೆ ಬರುತ್ತಿಲ್ಲ. ವಾಹನ ಪತ್ತೆಹಚ್ಚಿ ಚಾಲಕರ ಮನವೊಲಿಸುವಲ್ಲಿ ಆರ್ಟಿಒ ಅಧಿಕಾರಿಗಳು ಹೈರಾಣಾಗಿದ್ದಾರೆ.
ರಾಜಧಾನಿಯಲ್ಲಿ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು 500 ವಾಹನ ಗಳನ್ನು ಒದಗಿಸುವಂತೆ ಆರೋಗ್ಯ ಇಲಾಖೆ, ನಗರ ಜಿಲ್ಲಾಧಿಕಾರಿಗೆ ಸೂಚಿಸಿದೆ. ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದಿರುವ ಸರ್ಕಾರಿ ಇಲಾಖೆಗಳ ಜೀಪು ಮತ್ತು ಕಾರುಗಳನ್ನು ಕೂಡಲೇ ವಶಕ್ಕೆ ಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪರ್ದಿಗೆ ವಹಿಸುವಂತೆ ಡಿಸಿ ಕಚೇರಿಯಿಂದ ಆರ್ಟಿಒ ಕಚೇರಿಗೆ ಆದೇಶವಾಗಿದೆ.
ಆದರೆ, ಲಾಕ್ಡೌನ್ ಆದೇಶದ ಹಿನ್ನೆಲೆಯಲ್ಲಿ ಕಚೇರಿಗಳೆಲ್ಲ ರಜೆ ಇದೆ. ಆರ್ಟಿಒ ಅಧಿಕಾರಿಗಳು ಪ್ರತಿಯೊಂದು ಕಚೇರಿಗೂ ಅಲೆದು ಅಲೆದು ವಾಹನಗಳು ಸಿಗದೆ ಹೈರಾಣಾಗಿದ್ದಾರೆ. ಮತ್ತೆ ಕೆಲ ಕಚೇರಿಗಳಲ್ಲಿ ವಾಹನಗಳಿದ್ದರೂ ಅಧಿಕಾರಿಗಳು ಏನೋ ಒಂದು ಸಬೂಬು ಹೇಳಿ ವಾಹನ ಕೊಡಲು ನಿರಾಕರಿಸುತ್ತಿದ್ದಾರೆ. ಆಯಾ ಇಲಾಖೆ ಮುಖ್ಯಸ್ಥರು ಅಥವಾ ಮೇಲಧಿಕಾರಿ ಹೇಳಿದರೆ ವಾಹನ ಕೊಡುತ್ತಾರೆ. ನಮ್ಮ ವ್ಯಾಪ್ತಿಗೆ ಒಳಪಟ್ಟ ಇಲಾಖೆಯಾಗದ ಕಾರಣ ನಾವು ಕೇಳಿದರೂ ವಾಹನ ಕೊಡುವುದಿಲ್ಲ ಎಂದು ಆರ್ಟಿಒ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಚುನಾವಣೆ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಚಾಲಕರಿಗೆ ಕರೆ ಮಾಡಿ, ವಿಚಾರ ತಿಳಿಸಿದರೂ ವೈಯಕ್ತಿಕ ಕಾರಣ ಕೊಟ್ಟು ಬರುತ್ತಿಲ್ಲ. ಮತ್ತೆ ಕೆಲ ಇಲಾಖೆಗಳ ಚಾಲಕರು ಇಡೀ ದಿನ ಕಚೇರಿಯಲ್ಲೇ ವೃಥಾ ಕಾಲ ಕಳೆಯುತ್ತಿದ್ದರೂ ಕೂಡ ವಾಹನ ತೆಗೆಯುತ್ತಿಲ್ಲ. ಕ್ವಾರಂಟೈನ್ ವ್ಯಕ್ತಿಗಳನ್ನು ಕರೆದೊಯ್ಯಲು ಹಾಗೂ ಅವರಿರುವ ಸ್ಥಳಗಳಿಗೆ ಪರಿಶೀಲನೆಗೆ ಹೋಗಬೇಕಿರುವ ಹಿನ್ನೆಲೆಯಲ್ಲಿ ತಮಗೂ ಕರೊನಾ ಸೋಂಕು ಹರಡಬಹುದೆಂಬ ಭಯದಿಂದ ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.