ಜಿಲ್ಲೆ

ಅಟಲ್ ಭೂಜಲ ರಥಕ್ಕೆ ಚಾಲನೆ; ಯೋಜನೆ ಮುಂದುವರಿಕೆಗೆ ಕೇಂದ್ರಕ್ಕೆ ಮನವಿ

ಬೆಂಗಳೂರು :ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಸಂರಕ್ಷಣೆಗೆ ಪೂರಕವಾಗಿರುವ ಅಟಲ್ ಭೂಜಲ ಯೋಜನೆಯನ್ನು ಮುಂದುವರೆಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಭರವಸೆ ನೀಡಿದರು.

ಮಂಗಳವಾರ ನಗರದ ದೂರ ಸಂವೇದಿ ಕೇಂದ್ರದಲ್ಲಿ ಆಯೋಜಿಸಿದ್ದ ಅಟಲ್ ಭೂ ಜಲ ರಥಕ್ಕೆ ಹಾಗೂ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂತರ್ಜಲ ಪ್ರಮುಖ ಸಂಪನ್ಮೂಲವಾಗಿದೆ. ಈ ಸಂಪನ್ಮೂಲವನ್ನು ಜಾಗರೂಕವಾಗಿ ಬಳಸುವುದು ಹಾಗೂ ನಿರ್ವಹಣೆ ಮಾಡುವುದು ಎಲ್ಲರ ಜವಾಬ್ಧಾರಿಯಾಗಿದೆ. ಕರ್ನಾಟಕ ರಾಜ್ಯವೂ ಸೇರಿದಂತೆ ನಮ್ಮ ದೇಶದಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಸಲಾಗುತ್ತಿದೆ. ಮನೆ ಬಳಕೆಗೆ ಶೇ.85 ರಷ್ಟು, ಕೃಷಿ ಬಳಕೆಗೆ ಶೇ.60 ರಷ್ಟು, ಹಾಗೂ ಕೈಗಾರಿಕೆಗಳಿಗೆ ಶೇ. 2 ರಷ್ಟು ಅಂತರ್ಜಲವನ್ನು ಹೊರತೆಗೆಯುತ್ತಿದ್ದೇವೆ. ಇದರಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ ಹಾಗೂ ಅತ್ಯಂತ ಅಪಾಯಕಾರಿ ಹಂತವನ್ನು ತಲುಪಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ತಡೆಯಲು ಹಾಗೂ ಅಂತರ್ಜಲವನ್ನು ಸಮರ್ಪಕವಾಗಿ ನಿರ್ವಹಿಸಲು ಭಾರತ ಸರ್ಕಾರವು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಕರ್ನಾಟಕ ರಾಜ್ಯದ 14 ಜಿಲ್ಲೆಗಳ, 41 ತಾಲೂಕುಗಳ 1199 ಗ್ರಾಮ ಪಂಚಾಯತಿಗಳಲ್ಲಿ ಅನುಷ್ಟಾನಗೊಳ್ಳುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಅಟಲ್ ಭೂಜಲ ಯೋಜನೆಯ ಅಡಿಯಲ್ಲಿ ವಿವಿಧ ಇಲಾಖೆಗಳಡಿ ರೂ. 643.44 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಪೈಕಿ ಶೇಕಡಾ 97% ರಷ್ಟು ರೂ.623.93 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಕರ್ನಾಟಕ ರಾಜ್ಯವು ಅಟಲ್ ಭೂಜಲ ಯೋಜನೆಯ ಅನುಷ್ಟಾನದಲ್ಲಿ ಇಡೀ ದೇಶದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತಿತರಿದ್ದರು.