ಮನೋಹರ್ ಬಳಂಜ ಬೆಳ್ತಂಗಡಿ
ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಲ್‌ಜಲ್ ಮಿತ್ರ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಸಂಜೀವೀನಿ ಸ್ವಸಹಾಯ ಸಂಘದ ಸದಸ್ಯರ ಕೌಶಲ ವೃದ್ಧಿಗೆ ಕಾರ್ಯನಿರ್ವಹಿಸಲಾಗುತ್ತಿದೆ.
ನಲ್‌ಜಲ್ ಮಿತ್ರ ಯೋಜನೆಯಡಿಯಲ್ಲಿ ಪ್ರತಿ ಗ್ರಾಮದಲ್ಲಿ ಜಲ ಸಖಿಯರ ನೇಮಿಸಿ ತರಬೇತಿ ನೀಡಲಾಗುತ್ತಿದ್ದು, ಇವರೇ ಕುಡಿಯುವ ನೀರು ನಿರ್ವಹಣೆ ಮಾಡಲಿದ್ದಾರೆ.
48 ಗ್ರಾಪಂಗಳಲ್ಲಿ ನಿರ್ವಹಣೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ನಲ್‌ಜಲ್ ಮಿತ್ರ ಯೋಜನೆಯಡಿ ತಾಲೂಕಿನ 48 ಗ್ರಾಪಂಗಳಿಂದ ಸ್ವ ಸಹಾಯ ಸಂಘಗಳ ತಲಾ ಇಬ್ಬರು ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ. ಜಲಜೀವನ ಮಿಷನ್ ಯೋಜನೆಯಡಿ ‘ಮನೆ ಮನೆಗೂ ಗಂಗೆ’ ಎಂಬ ಕಾರ್ಯಕ್ರಮದಲ್ಲಿ ನೀರಿನ ಸಂಪರ್ಕ ಕಲ್ಪಿಸುತ್ತಿದ್ದು, ಇವುಗಳ ನಿರ್ವಹಣೆ, ಸಮಸ್ಯೆ ನಿವಾರಿಸಲು ತಾಂತ್ರಿಕ ಕೌಶಲವನ್ನು ನಲ್‌ಜಲ್ ಮಿತ್ರ ತರಬೇತಿಯಲ್ಲಿ ಕಲಿಸಲಾಗುತ್ತದೆ.
ಯಾವ ಗ್ರಾಮಗಳಿಂದ ಆಯ್ಕೆ?
ಅಳಂದಗಡಿ, ಅರಸಿನಮಕ್ಕಿ, ಬಂದಾರು, ಬೆಳಾಲು, ಚಾರ್ಮಾಡಿ, ಹೊಸಂಗಡಿ, ಇಳಂತಿಲ, ಇಂದಬೆಟ್ಟು, ಕಡಿರುದ್ಯಾವರ, ಕಳಿಯ, ಕಳೆಂಜ, ಕಲ್ಮಂಜ. ಕಣಿಯೂರು, ಕಾಶಿಪಟ್ಣ, ಕೊಕ್ಕಡ, ಕೊಯ್ಯುರು, ಲಾಯಿಲ, ಮಚ್ಚಿನ, ಮಡಂತ್ಯಾರು, ಮಾಲಾಡಿ, ಮಲವಂತಿಗೆ, ಮರೋಡಿ, ಮಿತ್ತಬಾಗಿಲು, ಮುಂಡಾಜೆ, ಮೇಲಂತಬೆಟ್ಟು, ನಡ, ನಾವೂರು, ನೆರಿಯ, ನಿಡ್ಲೆ, ಪಟ್ರಮೆ, ಪುದುವೆಟ್ಟು, ಶಿಬಾಜೆ, ಶಿಶಿಲ, ಸುಲ್ಕೇರಿ ಹಾಗೂ ಉಜಿರೆ ಗ್ರಾಮಗಳಲ್ಲಿ ಈಗಾಗಲೇ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
38 ಮಂದಿಗೆ ಇದೆ ಅವಕಾಶ
ಬೆಳ್ತಂಗಡಿ ತಾಲೂಕಿನಲ್ಲಿ 40 ಮಂದಿ ಒಳಗೊಂಡಿರುವ ಪ್ರಥಮ ಬ್ಯಾಚ್ ತರಬೇತಿಯ ಸಿದ್ಧತೆಯಲ್ಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾಲಾಡಿ ಐಟಿಐ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. 48 ಗ್ರಾಪಂಗಳಲ್ಲಿ ಪ್ರತಿ ಇಬ್ಬರು ಅಭ್ಯರ್ಥಿಗಳಿಗೆ ಅರ್ಜಿ ಸಲಿಸಲು ಅವಕಾಶವಿದ್ದು, ಅವರನ್ನು ಆಯಾಯ ಗ್ರಾಪಂ ಆಡಳಿತ ಮಂಡಳಿ ಮತ್ತು ಆ ಗ್ರಾಮದ ಸಂಜೀವಿನಿ ಒಕ್ಕೂಟ ಜಂಟಿಯಾಗಿ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಓರ್ವ ಅಭ್ಯರ್ಥಿಗೆ 24,790 ರೂ. ತರಬೇತಿ ವೆಚ್ಚ ತಗುಲುತ್ತದೆ. ಈ ವೆಚ್ಚವನ್ನು ಗ್ರಾಪಂ 15ನೇ ಹಣಕಾಸು ಅನುದಾನದಿಂದ ಭರಿಸಬೇಕಾಗುತ್ತದೆ. 48 ಗ್ರಾಪಂಗಳ ಪೈಕಿ 58 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇನ್ನೂ 38 ಮಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಏನಿದು ನಲ್‌ಜಲ್‌ಮಿತ್ರ?
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಸಚಿವಾಲಯ ಜಲಜೀವನ್ ಮಿಷನ್‌ನಡಿ ನಲ್‌ಜಲ್ ಮಿತ್ರ ಕಾರ್ಯಕ್ರಮ ಅನುಷ್ಠಾನ ಮಾಡಲು ಸೂಚಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಸ್ಥಳಿಯರಿಗೆ ಕೊಳಾಯಿ, ವಿದ್ಯುತ್ ಕೆಲಸ, ಕಲ್ಲು ಮಣ್ಣು ಕೆಲಸ, ಉಪಕರಣ ಹಾಗೂ ಯಂತ್ರೋಪಕರಣ ರಿಪೇರಿ ಕೆಲಸಗಳ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ ಪ್ರಮಾಣ ಪತ್ರ ನೀಡಲಾಗುತ್ತದೆ.
ಜಲ್‌ಜೀವನ್ ಮೀಷನ್ ಯೋಜನೆಯಡಿ ನಲ್‌ಜಲ್ ಮಿತ್ರ ಕಾರ್ಯಕ್ರಮ ಅನುಷ್ಠಾನಿಸಲು ಸೂಚಿಸಲಾಗಿದೆ. ಕುಡಿಯುವ ನೀರು ನಿರ್ವಹಣೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಆಯ್ಕೆಯಾದ ಸದಸ್ಯರಿಗೆ ಬಹು ಕೌಶಲ ತರಬೇತಿ ನೀಡಿ ಎನ್‌ಸಿಇಟಿ ಪ್ರಮಾಣ ಪತ್ರ ನೀಡಲಾಗುತ್ತದೆ. ತಾಲೂಕಿನಲ್ಲಿ 40 ಮಂದಿ ಬ್ಯಾಚ್ ತರಬೇತಿಗೆ ಸಿದ್ಧರಾಗಿದ್ದು, ಭವಿಷ್ಯದಲ್ಲಿ ಮಾಲಾಡಿ ಐಟಿಐ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತದೆ. ಭವಾನಿಶಂಕರ್ ಎನ್. ಇಒ ಬೆಳ್ತಂಗಡಿ ತಾಲೂಕು ಪಂಚಾಯಿತಿ