ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಜ.29ರಿಂದ ಫೆ.12ರ ವರೆಗೆ ನಡೆಸುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಗದಿ ಮಾಡಿದೆ.
ಪುರುಷ ಅಭ್ಯರ್ಥಿಗಳು ಯಾವುದೇ ಮಾಸ್ಕ್ ಧರಿಸುವಂತಿಲ್ಲ. ಅರ್ಧ ತೋಳಿನ ಶರ್ಟ್ ಮಾತ್ರ ಧರಿಸಬೇಕು. ತೊಡುವ ಬಟ್ಟೆ ಹಗುರ, ಹೆಚ್ಚು ಜಿಪ್ ಪಾಕೆಟ್, ದೊಡ್ಡ ಬಟನ್, ಕಸೂತಿ ಇರಬಾರದು. ಕುರ್ತಾ, ಪೈಜಾಮಕ್ಕೆ ಅವಕಾಶ ಇಲ್ಲ. ಶೂ ಹಾಕುವಂತಿಲ್ಲ.
ಮಹಿಳಾ ಅಭ್ಯರ್ಥಿಗಳು ಹೈ ಹೀಲ್ಡ್ ಚಪ್ಪಲಿ ಹಾಕುವಂತಿಲ್ಲ. ಕಿವಿಯೋಲೆ, ಉಂಗುರಗಳು, ನೆಕ್ಲೇಸ್ಗಳನ್ನು ಹಾಕಬಾರದು. ಉಳಿದಂತೆ ಡಿಜಿಟಲ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಕೊಂಡೊಯ್ಯುವಂತಿಲ್ಲ.
ಪ್ರವೇಶ ಪತ್ರ ಇಲ್ಲದೆ ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಫೋಟೋ ಇರುವ ಸರ್ಕಾರ ವಿತರಿಸಿರುವ ಗುರುತಿನ ಚೀಟಿ ಹೊಂದಿರಬೇಕು. ಪಾರದರ್ಶಕವಾದ ನೀರಿನ ಬಾಟಲಿ ಮಾತ್ರ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್ಸೈಟ್ cetonline.karnataka.gov.in ನೋಡಬಹುದು.