ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಡಾ. ವಿಜಯ ಸಂಕೇಶ್ವರ ಹಾಗೂ ಲಲಿತಾ ಸಂಕೇಶ್ವರ ದಂಪತಿ ಮಂಗಳವಾರ ಭೇಟಿ ನೀಡಿ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಿದರು. 
ಜಿಲ್ಲೆ

ವಿಜಯ ಸಂಕೇಶ್ವರ ಮುಂದಿನ ಪೀಳಿಗೆಗೆ ಯುಗದ ಯೋಗಿ: ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಬಣ್ಣನೆ

ಚಿತ್ರದುರ್ಗ: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಇವತ್ತಿನ ಸಂದರ್ಭಕ್ಕೆ ಒಬ್ಬ ಉದ್ಯಮಿಯಾಗಿ ಕಂಡರೂ ಅವರಲ್ಲಿರುವ ಧಾರ್ಮಿಕ ಶ್ರದ್ಧೆ ಮುಂದೆ ಅವರನ್ನು ಯುಗದ ಯೋಗಿಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಪತ್ನಿ ಜತೆ ಮಠಕ್ಕೆ ಭೇಟಿ ನೀಡಿದ್ದ ಅವರನ್ನು ಆಶೀರ್ವದಿಸಿ ಮಾತನಾಡಿ, ಇವರು ವಾಣಿಜ್ಯೋದ್ಯಮಕ್ಕೆ ಮಾತ್ರ ಸೀಮಿತವಾಗದೆ ಧರ್ಮ ಸಂರಕ್ಷಣೆಯಲ್ಲಿ ನಿರತರಾದ ಸಾಧು-ಸಂತರಿಗೆ ಆಶ್ರಯ ತಾಣ ಒದಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ಹಾಗೂ ಹಲವು ದೇವರುಗಳಿರುವ ದೇವಾಲಯವನ್ನು ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸುತ್ತಿದ್ದಾರೆ. ಕೇರಳದಲ್ಲಿ ನಾರಾಯಣ ಗುರುಗಳು ದೇವಸ್ಥಾನಗಳನ್ನು ಕಟ್ಟುವ ಮೂಲಕ ಹೇಗೆ ಧರ್ಮರಕ್ಷಕ ಎನಿಸಿದರೋ ಇಲ್ಲಿ ದೇವಾಲಯ ನಿರ್ಮಿಸುತ್ತಿರುವ ಸಂಕೇಶ್ವರ ಕೂಡ ನಮಗೆ ಹಾಗೆಯೇ ಕಾಣುತ್ತಾರೆ ಎಂದರು. ದೇವಾಲಯ ಪೂರ್ಣಗೊಂಡ ಬಳಿಕ ಮುಂದಿನ ತಲೆಮಾರಿಗೆ ಅವರು ಧರ್ಮಸ್ಥಾಪಕರಾಗಿ, ಮನುಕುಲದ ಯುಗಪುರುಷರಾಗುತ್ತಾರೆ ಎಂದು ಅಭಿಮಾನ ತೋರಿದರು.

ಶೋಷಿತ ಸಮುದಾಯದ ಮಠಗಳ ಮೇಲೆ ಅಪಾರ ಪ್ರೀತಿ: ಶೋಷಿತ ಸಮುದಾಯದ ಮಠಗಳ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ. ಈ ದೇಶದಲ್ಲಿ ನಿಮ್ನ ವರ್ಗಗಳು ಕೂಡ ಧಾರ್ಮಿಕ ವ್ಯವಸ್ಥೆಯಲ್ಲಿ ಮುಂದೆ ಬರಬೇಕು ಎಂಬ ಕಾಳಜಿ ತೋರುತ್ತಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಆಗಾಗ್ಗೆ ನಮ್ಮ ಮಠಕ್ಕೆ ಬರುತ್ತಿದ್ದು, ಅವರ ಭೇಟಿ ಮಠದ ಬೆಳವಣಿಗೆಗೆ ಸ್ಫೂರ್ತಿ ತುಂಬಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

ಗೂಗಲ್​ ನಕಾಶೆಯಲ್ಲಿ ಗುರುತಿಸಿರುವ ದೇಶದ ಎಲ್ಲ ರಸ್ತೆಗಳಲ್ಲಿ ವಿಆರ್​ಎಲ್​ ಸಂಸ್ಥೆಯ ವಾಹನಗಳು ಸಂಚರಿಸಬೇಕೆಂಬ ಹೆಬ್ಬಯಕೆ ಅವರಿಗಿದೆ. ನಮ್ಮ ಉತ್ಪಾದನೆ ನಮ್ಮ ಬಳಕೆ ಎಂಬುದು ಅವರ ನೀತಿ. ತಮ್ಮ ಉದ್ಯಮಗಳ ಮೂಲಕ ಎಲ್ಲ ವರ್ಗಗಳ ಜನರಿಗೆ ಬದುಕು ಕಟ್ಟಿ ಕೊಟ್ಟಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿರತರಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲೂ ಬಹು ದೊಡ್ಡ ಕ್ರಾಂತಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಶ್ರೀಗಳನ್ನು ಗೌರವಿಸಿದ ಸಂಕೇಶ್ವರ ದಂಪತಿ, ಮಠದ ಆವರಣದಲ್ಲಿರುವ ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ