ಜಿಲ್ಲೆ

ಎಡಪಂಥ, ಬಲಪಂಥ ಸಿದ್ಧಾಂತವಾದಿಗಳಿಂದ ಹುಟ್ಟಿದ್ದು: ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ

Mysuru Rural

ಮೈಸೂರು : ಎಡಪಂಥ, ಬಲಪಂಥ ಎಂಬ ಸಿದ್ಧಾಂತವೇ ಇಲ್ಲ. ಅದನ್ನು ಹುಟ್ಟುಹಾಕಿದ್ದೇ ಸಿದ್ಧಾಂತವಾದಿಗಳು. ವಾಸ್ತವ ವಿಚಾರಗಳನ್ನು ಹೇಳುವ, ಮುಕ್ತವಾಗಿ ಮಾತನಾಡುವ ಹಾಗೂ ಬರೆಯುವವರನ್ನು ಬಲಪಂಥಿಯರೆಂದು ಸಿದ್ಧಾಂತವಾದಿಗಳು ಕರೆಯುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರು ಸಹ ಈ ಆಪಾದನೆಯಿಂದ ಮುಕ್ತವಾಗಿರಲಿಲ್ಲ ಎಂದು ಹಿರಿಯ ಸಾಹಿತಿ ಡಾ.ಎಸ್. ಎಲ್. ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ವತಿಯಿಂದ ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಶಿವರಾಮ ಕಾರಂತ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ‘ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಕಾರಂತರು ಬಹಳ ದೊಡ್ಡ ಲೇಖಕರು, ಕಾದಂಬರಿಕಾರರು. ಕಾರಂತರಲ್ಲಿ ಮುಕ್ತವಾದ ಬರವಣಿಗೆಯನ್ನು ಕಾಣಬಹುದು. ಕಾರಣಕ್ಕೆ ಅವರನ್ನು ಬಲಪಂಥಿಯ ಲೇಖಕ ಎಂದು ಕರೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಮ್ಯುನಿಸ್ಟ್ ಚಿಂತನೆಗಳೇ ಕಾರಣ

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರಾ್ಯನಂತರದ ಕೆಲವು ವರ್ಷಗಳವರೆಗೂ ರೈತರು ಸಾಕಷ್ಟು ಶೋಷಣೆಗೆ ಗುರಿಯಾಗಿದ್ದರು. ರೈತರಿಗೆ ಅನುಕೂಲ ಕಲ್ಪಿಸುವ ಕೊಡುವ ನೀತಿಗಳು ಜಾರಿಗೆ ಬಂದಾಗ ಸಹ ಆಕ್ರೋಶವ್ಯಕ್ತವಾಗಿತ್ತು. ಅದೇ ರೀತಿಯ ಆಕ್ರೋಶ ಇದೀಗ ಕೇಂದ್ರ ಸರ್ಕಾರ ರೈತಪರವಾದ ಕಾಯ್ದೆಗಳನ್ನು ರೂಪಿಸಿದಾಗ ಕೇಳಿ ಬರುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ರೈತರಿಗೆ ತಮ್ಮ ಹೊಲದಲ್ಲಿ ಬೆಳೆಗಳನ್ನು ಬೆಳೆಯುವ ಹಕ್ಕು ಇತ್ತು. ಆದರೆ, ಮಾರಾಟದ ಹಕ್ಕು ಇರಲಿಲ್ಲ. ಬ್ರಿಟಿಷರು ರೂಪಿಸಿದ ಈ ನೀತಿಯನ್ನು ದೇಶದ ಪ್ರಥಮ ಪ್ರಧಾನಿ ನೆಹರೂ ಕೂಡ ಬದಲಾಯಿಸುವ ಮನಸ್ಸು ಮಾಡಲಿಲ್ಲ. ಆದರೆ, ಮದ್ರಾಸ್ ಸಂಸ್ಥಾನದ ಮುಖ್ಯಮಂತ್ರಿ ರಾಜಗೋಪಾಲಚಾರಿ ರೈತರಿಗೆ ಮಾರಾಟದ ಹಕ್ಕು ನೀಡಿದರು. ಇದನ್ನು ನೆಹರೂ ಸೇರಿ ಹಲವರು ವಿರೋಧಿಸಿದ್ದರು. ಆದರೆ, ಕಾಲಕ್ರಮೇಣ ಮದ್ರಾಸ್ ಸಂಸ್ಥಾನದ ಮಾದರಿಯಲ್ಲಿಯೇ ದೇಶದ ಎಲ್ಲ ಭಾಗಗಳಲ್ಲೂ ರೈತರಿಗೆ ಮುಕ್ತ ಮಾರಾಟಕ್ಕೆ ಅವಕಾಶ ದೊರೆಯಿತು ಎಂದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಎಸ್.ಎಲ್. ಭೈರಪ್ಪ ನಾಡುಕಂಡ ದೊಡ್ಡ ಸಾಹಿತಿ. ಅವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಿರುವುದು ಬಹಳ ಸಂತಸ ಉಂಟು ಮಾಡಿದೆ. ಇಂಥ ಸಾಹಿತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಲಿ ಎಂದು ಆಶಯವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರಿದ್ದರು.