ಜಿಲ್ಲೆ

ತವರಿನ ಆಸ್ತಿ ಪಾಲು ಕೇಳೆಂದು ಕಿರುಕುಳ ನೀಡ್ತಿದ್ದಾರೆನ್ನುತ್ತ ಸಾವಿಗೆ ಶರಣಾದ್ಳು- ಪ್ರೇಮವಿವಾಹದ ದುರಂತಕಥೆ

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸೆತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಈಕೆಯ ಪಾಲಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ವೈಟ್​ಫೀಲ್ಡ್ ನಿವಾಸಿ ಸುಜಾತಾ ಆತ್ಮಹತ್ಯೆಗೆ ಶರಣಾದವರು. ಬೇಲೂರು ಮೂಲದ ಭದ್ರೇಗೌಡ ನೀಡಿದ ದೂರಿನ ಆಧಾರದ ಮೇರೆಗೆ ವೈಟ್​ಫೀಲ್ಡ್ ಠಾಣೆ ಪೊಲೀಸರು ಸುಜಾತ ಪತಿ ಸುಶಾಂತ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಕಳೆದ 3 ವರ್ಷಗಳ ಹಿಂದೆ ಸುಜಾತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸುಶಾಂತ್ ಈಕೆಯನ್ನು ಪ್ರೀತಿಸುತ್ತಿದ್ದ. ಪಾಲಕರಿಗೆ ಹೇಳದೇ ಇಬ್ಬರೂ ವಿವಾಹವಾಗಿದ್ದರು. ವೈಟ್​ಫೀಲ್ಡ್​ನಲ್ಲಿ ನೆಲೆಸಿದ್ದ ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಪಾಲಕರಿಗೆ ಕರೆ ಮಾಡಿದ್ದ ಸುಜಾತ, ‘ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ವರದಕ್ಷಿಣೆ ರೂಪದಲ್ಲಿ ತವರು ಮನೆಯಲ್ಲಿರುವ ಆಸ್ತಿಯನ್ನು ತನಗೆ ನೀಡುವಂತೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದಿದ್ದಳು. ಅನುಸರಿಸಿಕೊಂಡು ಹೋಗುವಂತೆ ಪಾಲಕರು ಬುದ್ದಿಮಾತು ಹೇಳಿದ್ದರು.

ಆ.30ರಂದು ನಾದಿನಿಯ ಮಗಳು ಕರೆ ಮಾಡಿ, ಸುಜಾತ ಮನೆಯ ಕಿಟಕಿಯ ಸರಳಿಗೆ ವೇಲ್​ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಬೇಲೂರಿನಿಂದ ನಗರಕ್ಕೆ ಬಂದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಭದ್ರೇಗೌಡ ಆರೋಪಿಸಿದ್ದಾರೆ.