ದಾವಣಗೆರೆ: ದಾವಣಗೆರೆಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆ ಆರೋಪಿಯನ್ನು ಪ್ರಕರಣ ಬೆಳಕಿಗೆ ಬಂದ ಮೂರೇ ದಿನಗಳಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ದುರಂತವೆಂದರೆ ಕೊಲೆಗೀಡಾಗಿದ್ದ ಸೋದರಿಯರ ಪೈಕಿ ಒಬ್ಬಳ ಪತಿಯೇ ಆರೋಪಿ.
ಡಬಲ್ ಮರ್ಡರ್ ಪ್ರಕರಣದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ದಾವಣಗೆರೆ ವಿದ್ಯಾನಗರದ ಪೊಲೀಸರು ಆರೋಪಿ ಮಂಜುನಾಥ (46) ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಪತ್ನಿ ಗೌರಮ್ಮ (34) ಹಾಗೂ ಆಕೆಯ ತಂಗಿ ರಾಧಮ್ಮ (32) ಅವರನ್ನು ಕೊಲೆ ಮಾಡಿದ್ದ. ನಗರದ ಆಂಜನೇಯ ಮಿಲ್ ಬಡಾವಣೆಯ ಮನೆಯೊಂದರಲ್ಲಿ ಹತ್ತು ದಿನಗಳ ಹಿಂದೆ ಈ ಕೊಲೆ ನಡೆದಿತ್ತು.
ಕೊಲೆ ನಡೆದ ಏಳು ದಿನಗಳ ಬಳಿಕ ಅಂದರೆ ಜುಲೈ 30ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಸಹೋದರಿಯರಿಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಪತ್ನಿಯ ಶೀಲ ಶಂಕಿಸಿದ್ದ ಪತಿ, ಹೆಂಡತಿಯ ಜತೆಗೆ ಆಕೆಯ ತಂಗಿಯನ್ನೂ ಕೊಲೆ ಮಾಡಿದ್ದ. ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಬೆಂಗಳೂರಿನ ಚನ್ನಾಪುರದಲ್ಲಿ ಪತ್ತೆ ಮಾಡಿದ ಪೊಲೀಸರು ಬಂಧಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.