ಕಾರ್ಕಳ ತಾಲೂಕಿನ ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವ ಡೋಲಾರೋಪಣಾ ಸೇವೆ ನೆರವೇರಿತು. 
ಜಿಲ್ಲೆ

ತೊಟ್ಟಿಲಲ್ಲಿ ಹಾಕಿ ಕರುವಿಗೆ ನಾಮಕರಣ : ಡೋಲಾರೋಪಣಾ ಸೇವೆ : ಕಾರ್ಕಳದಲ್ಲಿ ಅಪೂರ್ವ ಕಾರ್ಯಕ್ರಮ

ಸೌಮ್ಯ ಆರ್

ಕಾರ್ಕಳ(ಉಡುಪಿ): ಹುಟ್ಟಿದ ಮಗುವನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವುದು ಸಾಮಾನ್ಯ. ಆದರೆ, ಕರುವೊಂದನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ ಕಾರ್ಕಳದಲ್ಲಿ ನಡೆದಿದೆ.

ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಈ ಅಪೂರ್ವ ಸಂಗತಿ ನಡೆದಿದ್ದು, ಕರುವನ್ನು ತೊಟ್ಟಿಲಿಗೆ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಗೋವಾ-ಮಹಾರಾಷ್ಟ್ರದ ಗಡಿಭಾಗದಲ್ಲಿ ಗೌಳಿಗ ಸಮುದಾಯದವರು ಆಚರಿಸುತ್ತಿರುವ ಈ ಸಾಂಪ್ರದಾಯ ಕರಾವಳಿ ತೀರದಲ್ಲಿ ವಿಶೇಷ. ಕಳೆದ ಜ.5ರಂದು ಬಂಡಿಮಠದಲ್ಲಿ ಕರುವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೊಟ್ಟಿಲಿಗೆ ಹಾಕಿ ಪೂಜೆ ಮಾಡಿದ್ದಾರೆ. ಈ ಧಾರ್ಮಿಕ ವಿಧಿವಿಧಾನಕ್ಕೆ ಡೋಲಾರೋಪಣಾ ಸೇವೆ ಎಂದು ಕರೆಯಲಾಗುತ್ತದೆ. ದೇಶದ ಸುಭಿಕ್ಷೆ, ಇಷ್ಟಾರ್ಥ ಸಿದ್ಧಿ, ದೇವರ ಪ್ರಸನ್ನಕೋಸ್ಕರ ಈ ಸೇವೆಯನ್ನು ನಡೆಸುತ್ತಾರೆ.

ಕೋಟಿ ಜಪ ಪಠಣ

ಈ ವಿಶೇಷ ಆಚರಣೆಗಾಗಿ ಉಡುಪಿಯ ರಾಮದಾಸ ಭಟ್ ಹಾಗೂ ಅವರ ವೈದಿಕ ತಂಡ ಒಂದು ಕೋಟಿ ಗೊಪಾಲಕೃಷ್ಣ ಜಪ ಪಠಿಸಿ, ಗೋಪಾಲಕೃಷ್ಣ ಹೋಮದೊಂದಿಗೆ ಕರುವನ್ನು ತೊಟ್ಟಿಲಿಗೆ ಹಾಕಿ, ಹಣ್ಣುಕಾಯಿ, ಅಕ್ಷತೆಯ ಹರಿವಾಣದೊಂದಿಗೆ ಮಂಗಳಾರತಿ ಬೆಳಗುವುದರೊಂದಿಗೆ ವಿಜೃಂಭಣೆಯಿಂದ ತೊಟ್ಟಿಲು ಹಾಕುವ ಸೇವೆ ನಡೆಸಿತು. ಒಂದು ಕೋಟಿ ಗೋಪಾಲಕೃಷ್ಣ ಜಪ ಪಠಿಸಲು ಸುಮಾರು 6 ತಿಂಗಳು ಕಳೆದಿದೆ. 1 ಕೋಟಿ ಜಪಕ್ಕೆ 1 ಲಕ್ಷ ಹೋಮ ಮಾಡಬೇಕೆಂಬ ವಾಡಿಕೆ ಇದೆ. ಜ.5ರಂದು ನಡೆಸಿದ ಗೋಪಾಲಕೃಷ್ಣ ಹೋಮದಲ್ಲಿ 10 ಸಾವಿರ ಹೋಮದ ಸಂಕಲ್ಪ ಹೊತ್ತು ಕೊಂಡಿದ್ದರು. ಅದರಂತೆ ಮುಂದೆ 9 ಹೋಮದಲ್ಲಿ 90 ಸಾವಿರ ಹೋಮದ ಸಂಕಲ್ಪಿಸಲಾಗಿದೆ.

ಶಾಸಕರಿಂದ ಗೋಪೂಜೆ

ಕರಾವಳಿಯ ತೀರದಲ್ಲಿ ಅಪೂರ್ವವಾಗಿ ನಡೆದ ಈ ಭಕ್ತಿಯ ಪ್ರಾಧಾನ್ಯ ಸಂಪ್ರದಾಯದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಪಾಲ್ಗೊಂಡು ಗೋವುಗಳಿಗೆ ವಿಶೇಷವಾಗಿ ಪೂಜೆ ನೆರವೇರಿಸಿದರು.

179 ವರ್ಷ ಇತಿಹಾಸದ ಗೋಶಾಲೆ

ಬಂಡಿಮಠ ಬಳಿಯಲ್ಲಿ ಇರುವ ಅನಂತಕೃಷ್ಣ ಗೋಶಾಲೆಗೆ 179 ವರ್ಷದ ಇತಿಹಾಸ ಇದೆ. ಕುಟ್ಟಪ್ಪ ಭಟ್ ಅವರು ಆರಂಭಿಸಿದ ಗೋಶಾಲೆಯನ್ನು ವಾಮನ ಭಟ್, ನರಸಿಂಹ ಭಟ್ ಹೀಗೆ ಆನುವಂಶಿಕವಾಗಿ ಇದೀಗ ಗೋಪಿನಾಥ ಭಟ್ ನಿರ್ವಹಿಸುತ್ತಾ ಬಂದಿದ್ದಾರೆ. ಗೋ ಶಾಲೆಯಲ್ಲಿ ಪ್ರಸ್ತುತ 190ಕ್ಕೂ ಅಧಿಕ ಗೋವುಗಳಿವೆ.

ಡೋಲಾರೋಪಣಾ ಸೇವಾ ಕಾರ್ಯವನ್ನು ಉಡುಪಿಯ ರಾಮದಾಸ ಭಟ್ ನೇತೃತ್ವದಲ್ಲಿ ನಡೆಸಲಾಗಿದೆ. ಭಕ್ತಿಯ ಪ್ರಾಧಾನ್ಯವಾಗಿ, ಲೋಕ ಕಲ್ಯಾಣಾರ್ಥ ಮಾಡಲಾಗಿದೆ. - ಗೋಪಿನಾಥ ಭಟ್, ಮುಖ್ಯಸ್ಥ, ಅನಂತಕೃಷ್ಣ ಗೋಶಾಲೆ