ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಈ ಸಲ ಪ್ರಪ್ರಥಮ ಬಾರಿಗೆ ಎಂಬಂತೆ ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾಗೆ ಮೋದಿ ಆಗಮಿಸುವುದು ಖಚಿತವಾಗಿದೆ. ಈ ನಡುವೆ ದಸರಾಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಚಾರ ಕೂಡ ಮುನ್ನೆಲೆಗೆ ಬಂದಿದ್ದು, ಅವರ ಆಗಮನದ ಕುರಿತು ಚರ್ಚೆ ನಡೆಯುತ್ತಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿಯವರು ದಸರಾಗೆ ಬರುವ ವಿಚಾರ ಇನ್ನೂ ಖಚಿತವಾಗಿಲ್ಲ. ಹಲವು ಕಾರ್ಯಕ್ರಮಗಳ ಪಟ್ಟಿಯನ್ನು ಅವರು ಕೊಟ್ಟಿದ್ದಾರೆ. ಆದರೆ ಯಾವುದೇ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂಬುದನ್ನು ತಿಳಿಸಿದ್ದಾರೆ.
ಇನ್ನೊಂದೆಡೆ ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯೋಗ ದಿನಕ್ಕೆ ಮೈಸೂರಿಗೆ ಬಂದಿದ್ದಾಗಲೇ ಮೋದಿ ಅವರು ದಸರಾ ನೋಡುವ ಆಸೆ ವ್ಯಕ್ತಪಡಿಸಿದ್ದರು. ಈ ಕಾರಣ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು. ಪ್ರಧಾನಿಗಳು ಬರುವರೋ ಇಲ್ಲವೋ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಯೋಗ ದಿನಕ್ಕೆ ಪ್ರಧಾನಿಯವರು ಮೈಸೂರಿಗೆ ಬಂದಾಗ ತಾಯಿ ಚಾಮುಂಡಿಯ ದರ್ಶನ ಮಾಡಿದ್ದರು. ಆಗ ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷ. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಪಡೆಯಲಾಗಿದೆ. ದಸರಾ ಸಿದ್ಧತೆ ಹೇಗಿದೆ, ಪ್ರಧಾನಿಯವರು ದಸರಾಗೆ ಬರುವುದಾದರೆ, ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ. ಅಲ್ಲದೆ ರಾಷ್ಟ್ರಪತಿ ಬರುತ್ತಿರುವ ಕಾರಣ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಪ್ರಧಾನಿ ಬಂದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.