ಮೈಸೂರು: ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸೋದು ವಾಡಿಕೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ತನ್ನ ಪತ್ನಿಯನ್ನೇ ಸುಟ್ಟು ಹಾಕಿದ್ದಾನೆ!
ಇಂತಹದ್ದೊಂದು ಕ್ರೂರ ಘಟನೆ ನರಕ ಚತುರ್ದಶಿ ದಿನವೇ ಮೈಸೂರು ಜಿಲ್ಲೆಯ ದೊಡ್ಡಮುಲಗೂಡು ಗ್ರಾಮದಲ್ಲಿ ಸಂಭವಿಸಿದೆ. ಶಾಂತಮ್ಮ(22) ಮೃತ ದುರ್ದೈವಿ.
ನಂಜನಗೂಡು ಪಟ್ಟಣದ ಅಶೋಕಪುರಂ ನಿವಾಸಿ ಶಾಂತಮ್ಮಳನ್ನು ತಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮದ ರಮೇಶ ಎಂಬಾತನೊಂದಿಗೆ ತಿ.ನರಸೀಪುರದ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಈತ ದೊಡ್ಡಮುಲಗೂಡು ಗ್ರಾಮ ಪಂಚಾಯಿತಿ ಸದಸ್ಯ. ಈತನ ದುಷ್ಕೃತ್ಯದಿಂದಾಗಿ ಶಾಂತಮ್ಮ ಸುಟ್ಟುಕರಕಳಾಗಿದ್ದಾಳೆ. ದೀಪಾವಳಿ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಶೋಕ ಮಡುಗಟ್ಟಿದೆ. ಪತ್ನಿ ಸಾವಿನ ಬಳಿಕ ರಮೇಶ್ ಪರಾರಿಯಾಗಿದ್ದಾನೆ.
ಇತ್ತೀಚಿಗೆ ರಮೇಶ್ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಅದನ್ನು ಕೊಡದ ಕಾರಣಕ್ಕಾಗಿ ನನ್ನ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿ, ಬಳಿಕ ಸೀಮೆ ಎಣ್ಣೆ ಸುರಿದು ಸುಟ್ಟುಹಾಕಿದ್ದಾನೆ ಎಂದು ಮೃತಳ ತಂದೆ ಕಾಳಿಂಗಸ್ವಾಮಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುವ ತವಕದಲ್ಲಿದ್ದ ರಮೇಶ್, ಮಾವನ ಮನೆಯವರನ್ನು ಹಣಕ್ಕೆ ಪೀಡಿಸಿದ್ದ. ಹಣ ಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಜರು ನಡೆಸಿದರು. ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)