ಗದಗ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ, ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಮೃತ ಗರ್ಭಿಣಿಯ ಗರ್ಭದಿಂದ ಹೆಣ್ಣು ಕೂಸನ್ನು ಜೀವಂತವಾಗಿ ಹೊರತೆಗೆದ ಅಪರೂಪ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಈ ಸಾಧನೆಗೆ ಗದಗ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ತುಂಬು ಗರ್ಭಿಣಿಯಾಗಿದ್ದರು. ಅವರಿಗೆ ನ.4ರಂದು ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಹೆರಿಗೆ ನೋವು ಇರದೆ ಮೂರ್ಛೆರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರು. ಮನೆಯಲ್ಲಿಯೇ ಅವರಿಗೆ ಎರಡು ಸಲ ಮೂರ್ಛೆರೋಗ ಬಂದಿತ್ತು. ಮನೆಯವರು ಕೂಡಲೆ ರೋಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಗರ್ಭಿಣಿಯ ಆರೋಗ್ಯ ಸ್ಥಿತಿ ಗಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯತೆ ಮನಗಂಡು ಜಿಲ್ಲಾ ಕೇಂದ್ರ ಅಥವಾ ಹುಬ್ಬಳ್ಳಿಗೆ ತೆರಳಬೇಕೆಂದು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ
ಆಂಬುಲೆನ್ಸ್ ಮೂಲಕ ಗದಗಕ್ಕೆ ಬರುವ ಮಾರ್ಗದಲ್ಲಿ ಗರ್ಭಿಣಿಗೆ ಮತ್ತೊಮ್ಮೆ ಮೂರ್ಛೆರೋಗ ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆ ಆವರಣದೊಳಗೆ ಬರುವಷ್ಟರಲ್ಲಿ ಗರ್ಭಿಣಿಗೆ ಕಡಿಮೆ ರಕ್ತದೊತ್ತಡ ಉಂಟಾಗಿ ಮೃತಪಟ್ಟಿದ್ದಾರೆ. ಈ ಸಮಯದಲ್ಲಿ ವೈದ್ಯರು ಗರ್ಭಿಣಿ ಹೊಟ್ಟೆಯಲ್ಲಿದ್ದ ಮಗುವಿನ ಎಫ್ಎಚ್ಎಸ್ (ಫಿಟಲ್ ಹಾರ್ಟ್ ಸೌಂಡ್) ಬಡಿಯುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಆಪರೇಷನ್ ಮಾಡಿದರೆ ಮಗು ಬದುಕುಳಿಯಬಹುದು ಎಂದು ಸ್ತ್ರೀರೋಗ ತಜ್ಞ ಡಾ.ವಿನೋದ, ಅನಸ್ತೇಸಿಯಾ ವಿಭಾಗದ ಡಾ.ಅಜಯ್, ಡಾ.ಕೀರ್ತನ್, ಡಾ.ಜಯರಾಜ, ಡಾ.ಶ್ರುತಿ ನೇತೃತ್ವದ ವೈದ್ಯರ ತಂಡ ರ್ಚಚಿಸಿತು. ಬಳಿಕ ಮೇಲಧಿಕಾರಿಗಳು ಮತ್ತು ಮೃತ ಮಹಿಳೆ ಮನೆಯವರ ಒಪ್ಪಿಗೆ ಪಡೆದು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಿದೆ.
ಆಸ್ಪತ್ರೆಯ ಸಮಯಪ್ರಜ್ಞೆಯಿಂದ ಅಮೂಲ್ಯ ಜೀವವೊಂದು ಬದುಕುಳಿಯಿತು. ಆದರೆ, ಸಮಯ ಮೀರಿದ್ದರಿಂದ ಗರ್ಭಿಣಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯ ಒಬಿಜಿ ವಿಭಾಗದ ವೈದ್ಯರ ಸಾಧನೆ ಅಪರೂಪ. ಮರೆಯಲಾಗದ ಕಾರ್ಯ.
| ಡಾ. ಬಸನಗೌಡ ಕರಿಗೌಡರ ಆಡಳಿತಾಧಿಕಾರಿ, ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ಗದಗ