ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 
ಜಿಲ್ಲೆ

ಆನಂದ ಸಂಕೇಶ್ವರ ಸೇರಿ ಮೂವರಿಗೆ ಡಾಕ್ಟರೇಟ್ ಪ್ರದಾನ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ

Webdesk - Ravikanth

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್​ಒಯು) ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರೊಂದಿಗೆ, ಆರ್​ವಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ ಮತ್ತು ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಈ.ಎಸ್.ಚಕ್ರವರ್ತಿ ಅವರಿಗೂ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಸ್​ಒಯು 17ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಈ ಕ್ಷಣಕ್ಕೆ ಸಾಕ್ಷಿಯಾಯಿತು. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಎ.ಬಿ.ಬಸವರಾಜು ಘಟಿಕೋತ್ಸವ ಭಾಷಣ ಮಾಡಿದರು. ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಡಾ.ಆರ್.ರಾಜಣ್ಣ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 31 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್​ಡಿ ಪದವಿ, 48 ಜನರಿಗೆ ಚಿನ್ನದ ಪದಕ, 38 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿನ 8,338 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.

ತಂದೆಯೇ ನನಗೆ ರೋಲ್ ಮಾಡಲ್

ತಂದೆ ಡಾ.ವಿಜಯ ಸಂಕೇಶ್ವರ ಅವರೇ ನನಗೆ ರೋಲ್ ಮಾಡಲ್. ನನ್ನೆಲ್ಲ ಸಾಧನೆಗೆ ಅವರೇ ಕಾರಣ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹೇಳಿದರು. ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾನು 14-15ನೇ ವಯಸ್ಸಿನಲ್ಲಿರುವಾಗಲೇ ತಂದೆಯವರೊಂದಿಗೆ ವೃತ್ತಿಯಲ್ಲಿ ಸಕ್ರಿಯನಾದೆ. ಶಾಲಾ-ಕಾಲೇಜಿನ ಕಲಿಕೆಯ ಜತೆ ಕಚೇರಿಯಲ್ಲೇ ಹೆಚ್ಚಿನ ಸಮಯ ಕಳೆದಿರುವೆ. ತಂದೆಯವರ ತರಬೇತಿ ನನಗೆ ಆರ್ವಿು ಟ್ರೖೆನಿಂಗ್​ನಂತೆ ಇತ್ತು. ಅಲ್ಲೇ ಶಿಸ್ತು ಕಲಿಸಿಕೊಟ್ಟರು. ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಇತ್ತೀಚೆಗೆ ಅವರಿಗೂ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪುರಸ್ಕಾರ ದೊರೆತಿದೆ ಎಂದು ಸಂತಸದಿಂದ ನುಡಿದರು. ನನ್ನ ತಂದೆಯವರು ಒಂದು ಟ್ರಕ್​ನಿಂದ ವೃತ್ತಿ ಜೀವನ ಆರಂಭಿಸಿದ್ದರು. ಇದೀಗ 5000ಕ್ಕೂ ಅಧಿಕ ಲಾರಿಗಳನ್ನು ಹೊಂದುವ ಮೂಲಕ ನಾವು ದೇಶದ ಲಾಜಿಸ್ಟಿಕ್ ಕ್ಷೇತ್ರದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆಯಿಂದ ತಿಳಿಸಿದರು. ಈ ಪದವಿಯನ್ನು ಖುಷಿಯಿಂದ ಸ್ವೀಕರಿಸಿರುವೆ. ಜವಾಬ್ದಾರಿಯೂ ಹೆಚ್ಚಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವೆ. ನನ್ನ ಸಾಧನೆ ಹಿಂದೆ ವಿಆರ್​ಎಲ್ ಬಳಗದ ಕೊಡುಗೆ ಮತ್ತು ನನ್ನ ಕುಟುಂಬದ ಬೆಂಬಲ ಇದೆ ಎಂದರು.

81, 75ರ ಹರಯದಲ್ಲಿ ಪದವಿಯ ಗರಿಮೆ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭ ವೃದ್ಧರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಯಿತು. 81 ವರ್ಷದ ಶ್ರೀನಿವಾಸಮೂರ್ತಿ, 75 ವರ್ಷದ ಎನ್.ಶ್ರೀಧರ್ ಸ್ನಾತಕೋತ್ತರ ಪದವಿ ಪಡೆದು ಇಳಿವಯಸ್ಸಿನಲ್ಲಿ ಸಾಧಕರಾಗಿ ಇತರರಿಗೆ ಮಾದರಿಯಾದರು. ಶ್ರೀನಿವಾಸಮೂರ್ತಿ ಮಾತೃಭಾಷೆ ಕನ್ನಡದಲ್ಲಿ, ಎನ್.ಶ್ರೀಧರ್ ಪ್ರಾಚೀನ ಭಾಷೆ ಸಂಸ್ಕೃತ ವಿಷಯದಲ್ಲಿ ಎಂ.ಎ. ಪದವಿ ಮುಡಿಗೇರಿಸಿ ಕೊಂಡರು.

ಮೈಸೂರಿನಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಆರ್​ವಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಈ.ಎಸ್.ಚಕ್ರವರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವ ಸಂದರ್ಭ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಅವರೊಂದಿಗೆ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಸಂಕೇಶ್ವರ, ಶಿವ ಸಂಕೇಶ್ವರ, ವೈಷ್ಣವಿ ಸಂಕೇಶ್ವರ ಹಾಗೂ ಛಾಯಾ ಸಂಕೇಶ್ವರ.
ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು.