ಜಿಲ್ಲೆ

ರೋಗಿಯನ್ನು ನೋಡಲು ಬಂದವರನ್ನು ಥಳಿಸಿದ ಡಾಕ್ಟರ್​! ಬೆಚ್ಚಿ ಬೀಳಿಸುತ್ತೆ ಈ ಆಸ್ಪತ್ರೆಯಲ್ಲಿ ನಡೆದ ಘಟನೆ

ನೆಲಮಂಗಲ: ಸಂಬಂಧಪಟ್ಟವರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ಅವರನ್ನು ನೋಡಲು ಬಂದ ಯುವಕರ ಮೇಲೆ ಡಾಕ್ಟರ್​ ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೇರ್​ ಏಷ್ಯಾ ಆಸ್ಪತ್ರೆಯಲ್ಲಿ ನಡೆದಿದೆ.

ಡಾಕ್ಟರ್​ ಶ್ರೀನಿವಾಸ್​ ಆರೋಪಿತ ವೈದ್ಯ. ಈತ ತ್ಯಾಮಗೊಂಡ್ಲು ಲೋಕೇಶ್ ಹಾಗೂ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆಯ ದೃಶ್ಯವನ್ನು ವಿಡಿಯೋ ಮಾಡಿಕೊಂಡ ಹಿನ್ನೆಲೆ ಅವರಿಬ್ಬರನ್ನು ರೂಮಿನೊಳಗೆ ಕೂಡಿ ಹಾಕಿ ಮೊಬೈಲ್​ನ್ನು ಕಿತ್ತುಕೊಂಡು ವಿಡಿಯೋ ಡಿಲೀಟ್​ ಮಾಡಿರುವುದಾಗಿಯೂ ಆರೋಪಿಸಲಾಗಿದೆ.

ಸ್ಥಳೀಯರು ತಮ್ಮ ಮೊಬೈಲ್​ಗಳಲ್ಲಿ ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅಂದ ಹಾಗೆ ಈ ಆಸ್ಪತ್ರೆಯನ್ನು ತಾಲೂಕು ಆಡಳಿತದ ಅನುಮತಿ ಇಲ್ಲದೆಯೇ ನಿರ್ಮಿಸಲಾಗಿದೆ ಎನ್ನುವುದು ತಿಳಿದುಬಂದಿದೆ. ಈ ರೀತಿಯ ಕೃತ್ಯ ನಡೆಸಿರುವ ಇವರು ವೈದ್ಯರೋ ಅಥವಾ ರೌಡಿಗಳೋ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.